ADVERTISEMENT

ಶುರುವಾಯಿತು ಅದಿರು ಲೂಟಿ ಸಮೀಕ್ಷೆ

‘ಸಿ’ ವರ್ಗದ ಗಣಿಗಳ ವರದಿ ಸಲ್ಲಿಸುವಂತೆ 50 ಪತ್ರ ಬರೆದಿರುವ ಎಸ್‌ಐಟಿ

ಹೊನಕೆರೆ ನಂಜುಂಡೇಗೌಡ
Published 20 ಮೇ 2020, 1:54 IST
Last Updated 20 ಮೇ 2020, 1:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ‘ಸಿ’ ವರ್ಗದ ಗಣಿಗಳಲ್ಲಿ ಎಷ್ಟು ಪ್ರಮಾಣದ ಅದಿರು ಹೊರತೆಗೆಯಲಾಗಿದೆ ಎಂಬ ಬಗ್ಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್ ಧನಬಾದ್‌ ನೆರವಿನೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಮೀಕ್ಷೆ ನಡೆಸುತ್ತಿದೆ.

‘ಐಐಎಂ ತಾಂತ್ರಿಕ ಸಲಹೆಗಳನ್ನು ನೀಡಿದೆ. ‘ಸಿ’ ವರ್ಗದ ಗಣಿಗಳಲ್ಲಿ ತೆಗೆದಿರುವ ಅದಿರು ಪ್ರಮಾಣವನ್ನು ಯಾವ ವಿಧಿವಿಧಾನದ ಅನುಸರಿಸಿ ನಿಶ್ಚಯಿಸಬೇಕು ಎಂದೂ ಹೇಳಿದೆ. ಅದೇ ವಿಧಾನದಲ್ಲಿ ನಮ್ಮ ಇಲಾಖೆ ಪರಿಣಿತರು ಪ್ರಾಯೋಗಿಕ ಸಮೀಕ್ಷೆ ನಡೆಸುತ್ತಿದ್ದಾರೆ. ರಿಮೋಟ್‌ ಸೆನ್ಸಿಂಗ್‌ ಏಜೆನ್ಸಿಯೂ ಸಹಕರಿಸುತ್ತಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗಣಿಗಳಲ್ಲಿ ತೆಗೆದ ಅದಿರು ಪ್ರಮಾಣ ಅಂದಾಜು ಮಾಡಲು ‘ಸರ್‌ಪ್ಯಾಕ್’ ಎಂಬ ಸಾಫ್ಟ್‌ವೇರ್‌ ಅಗತ್ಯವಿದೆ. ಗಣಿ ಸಮೀಕ್ಷೆ ಅಂತಿಮಗೊಂಡ ನಂತರ ಟೆಂಡರ್‌ ಆಹ್ವಾನಿಸಿ, ಸಾಫ್ಟ್‌ವೇರ್ ಖರೀದಿಸಲಾಗುವುದು ಎಂದು ಮೂಲಗಳು ಹೇಳಿವೆ.

ADVERTISEMENT

‘ಸಿ’ ಗಣಿಗಳಲ್ಲಿ ಹೊರತೆಗೆದಿರುವ ಅದಿರು ಸಮೀಕ್ಷೆ ಕಾರ್ಯ ತಿಂಗಳುಗಳ ಹಿಂದೆಯೇ ಆರಂಭವಾಗಬೇಕಿತ್ತು. ಲಾಕ್‌ಡೌನ್‌ನಿಂದ ವಿಳಂಬವಾಗಿದೆ. ಒಮ್ಮೆ ಸಮೀಕ್ಷೆ ಶುರುವಾದರೆ 6 ತಿಂಗಳಲ್ಲಿ ಮುಗಿಯಲಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಸಚಿವರ ಬಂಧುಗಳು, ಬಿಜೆಪಿ ಶಾಸಕರು, ಮಾಜಿ ಸಚಿವರೂ ಸೇರಿದಂತೆ ಕೆಲವು ಪ್ರಭಾವಿಗಳು ನಡೆಸಿದ್ದರೆನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡುವಂತೆ ಎಸ್‌ಐಟಿ 50ಕ್ಕೂ ಹೆಚ್ಚು ಪತ್ರಗಳನ್ನು ಬರೆದ ಬಳಿಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚೆತ್ತುಕೊಂಡಿದೆ.

ಅಕ್ರಮ ಗಣಿಗಾರಿಕೆ ತನಿಖೆಗೆ 2014ರಲ್ಲಿ ಎಸ್‌ಐಟಿ ರಚಿಸಿದ್ದು, ‘ಬಿ’ ಮತ್ತು ‘ಸಿ’ ವರ್ಗದ ಗಣಿಗಳಲ್ಲಿ ಅದಿರು ತೆಗೆದು ಸಾಗಿಸಿದ ಪ್ರಕರಣಗಳ ತನಿಖೆ ನಡೆಸುತ್ತಿದೆ. 2015–16ರಲ್ಲಿ 14 ಪ್ರಕರಣಗಳು ದಾಖಲಾಗಿದ್ದು, ಗಣಿ ಇಲಾಖೆ ಅಸಹಕಾರದಿಂದ ತನಿಖೆ ಪೂರ್ಣಗೊಂಡಿಲ್ಲ ಎಂದು ಎಸ್‌ಐಟಿ ಮೂಲಗಳು ಆರೋಪಿಸಿದ್ದವು.

ಸುಪ್ರೀಂಕೋರ್ಟ್‌ ಮೇಲುಸ್ತುವಾರಿಯಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸಿದ ಕೇಂದ್ರ ಉನ್ನತಾಧಿಕಾರದ ಸಮಿತಿ (ಸಿಇಸಿ) 2012ರ ಫೆಬ್ರುವರಿ 3ರಂದು ಅಂತಿಮ ವರದಿ ಸಲ್ಲಿಸಿದೆ. ರಾಜ್ಯದ ಒಟ್ಟು 166 ಗಣಿ ಗುತ್ತಿಗೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದು, ವ್ಯಾಪಕ ಅಕ್ರಮ ನಡೆದಿದ್ದ 51 ಗುತ್ತಿಗೆಗಳನ್ನು ‘ಸಿ’ ವರ್ಗದಲ್ಲಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.