ಕಲ್ಲು ಗಣಿಗಾರಿಕೆ
ಬೆಂಗಳೂರು: ‘ಕಲ್ಲು ಗಣಿಗಾರಿಕೆಗೆ ಪರವಾನಗಿ ಪಡೆದಿದ್ದರೂ ಹಲವು ಇಲಾಖೆಗಳು ಅನಗತ್ಯವಾಗಿ ಕಿರುಕುಳ ನೀಡುತ್ತಿವೆ’ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದರು.
ಒಕ್ಕೂಟದ ಮಹಾ ವಾರ್ಷಿಕ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ ಒಕ್ಕೂಟ ಅಧ್ಯಕ್ಷ ಡಿ. ಸಿದ್ದರಾಜು, ‘ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ಮಾಡುವವರಿಗೆ ಐದು ಪಟ್ಟು ದಂಡ ವಿಧಿಸಲಾಗುತ್ತಿದೆ. ವಿದ್ಯುತ್ ಬಿಲ್‌ಗೆ ದಂಡ ವಿಧಿಸಿ, ಗಣಿಗಾರಿಕೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ’ ಎಂದು ದೂರಿದರು.
‘ಸರ್ಕಾರಿ ಭೂಮಿಯಲ್ಲಿ ಕ್ರಷರ್ ಘಟಕ ಹಾಕಿದವರಿಗೆ ಭೂ ಬಾಡಿಗೆ ಹೊರೆಯಾಗಿದೆ. ಘಟಕದ ಪಕ್ಕದಲ್ಲಿ ಉಪಯೋಗಕ್ಕೆ ಬಾರದ ಸರ್ಕಾರಿ ಸ್ಥಳವನ್ನು ತ್ಯಾಜ್ಯ ಬಳಕೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಆದರೆ, ಕಂದಾಯ ಇಲಾಖೆ ಇದನ್ನು ಅಕ್ರಮ ಎಂದು ನೀಡಿರುವ ವರದಿಯಂತೆ ಲೋಕಾಯುಕ್ತರು ಎಫ್‌ಐಆರ್ ಮಾಡುತ್ತಿದ್ದಾರೆ. ಇದರಿಂದ ಅನಗತ್ಯವಾಗಿ ಕಿರುಕುಳವಾಗುತ್ತಿದೆ’ ಎಂದು ಹೇಳಿದರು.
‘ಕಂದಾಯ ಅಧಿಕಾರಿಗಳು ಸುಖಾಸುಮ್ಮನೆ ನೋಟಿಸ್ ನೀಡುತ್ತಿರುವುದರಿಂದ ಮಾಲೀಕರು ಕಚೇರಿಗಳಿಗೆ ಅಲೆಯಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳೂ ತೊಂದರೆ ನೀಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ನಮ್ಮ ನೆರವಿಗೆ ಬರುತ್ತಿಲ್ಲ. ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ನಮಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಎಲ್ಲ ಸಚಿವರು, ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.
‘ರಾಜ್ಯದಲ್ಲಿ 3 ಸಾವಿರ ಕಲ್ಲು ಗಣಿಗಾರಿಕೆ ಕ್ರಷರ್ ಘಟಕಗಳಿವೆ. ಇದರಲ್ಲಿ 1200 ಜನರು ಈಗಾಗಲೇ ಸಮಸ್ಯೆಗಳನ್ನು ಎದುರಿಸಲಾಗದೆ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಅನಗತ್ಯ ಕಿರುಕುಳ ಮುಂದುವರಿದರೆ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲು ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಒಕ್ಕೂಟ ಪದಾಧಿಕಾರಿಗಳು ಸೇರಿದಂತೆ, 31 ಜಿಲ್ಲೆಗಳ ಪದಾಧಿಕಾರಿಗಳೂ ನಿರ್ಧರಿಸಿದರು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.