ADVERTISEMENT

ಗಿನ್ನಿಸ್‌ ವಿಶ್ವದಾಖಲೆಗಾಗಿ ಹುಬ್ಬಳ್ಳಿಯ ಸ್ತುತಿ ಕುಲಕರ್ಣಿ ಸಾಹಸ

ಹೂಲಾಹುಪ್‌: 100 ಮೀಟರ್‌ ಗುರಿಯನ್ನು 23.35 ಸೆಕೆಂಡ್‌ಗಳಲ್ಲಿ ತಲುಪಿದ ಹುಬ್ಬಳ್ಳಿ ಹುಡುಗಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 8:33 IST
Last Updated 8 ಜನವರಿ 2021, 8:33 IST
ಸ್ಕೇಟಿಂಗ್‌ನ ಇನ್‌ಲೈನ್‌ ವಿಭಾಗದ 3 ಹೂಲಾಹುಪ್‌ನ 100 ಮೀಟರ್‌ ಗುರಿ ತಲುಪಿದ ಸ್ತುತಿ
ಸ್ಕೇಟಿಂಗ್‌ನ ಇನ್‌ಲೈನ್‌ ವಿಭಾಗದ 3 ಹೂಲಾಹುಪ್‌ನ 100 ಮೀಟರ್‌ ಗುರಿ ತಲುಪಿದ ಸ್ತುತಿ   

ಹುಬ್ಬಳ್ಳಿ: ನಗರದ ಹತ್ತು ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಶುಕ್ರವಾರ ಸ್ಕೇಟಿಂಗ್‌ನ ಇನ್‌ಲೈನ್‌ ವಿಭಾಗದ 3 ಹೂಲಾಹುಪ್‌ನ 100 ಮೀಟರ್‌ ಗುರಿಯನ್ನು 23.35 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ಗಿನ್ನಿಸ್‌ ವಿಶ್ವ ದಾಖಲೆಗೆ ಉತ್ತಮ ಪ್ರಯತ್ನ ಮಾಡಿದರು.

ಶಿರೂರು ಪಾರ್ಕ್‌ನ ಟೆಂಡರ್ ಶ್ಯೂರ್‌ ರಸ್ತೆ ಮೇಲೆ ನಡೆದ ಮೊದಲ ಯತ್ನದಲ್ಲಿ ಸ್ತುತಿ 23.68 ಮತ್ತು ಎರಡನೇ ಯತ್ನದಲ್ಲಿ 23.88 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೂರನೇ ಯತ್ನದಲ್ಲಿ ಗುರಿ ತಲುಪಿದ 23.35 ಸೆಕೆಂಡ್‌ ಉತ್ತಮ ಸಮಯ ಎನಿಸಿಕೊಂಡಿತು.

‘ರೋಲರ್‌ ಸ್ಕೇಟಿಂಗ್‌ನ 3 ಹೂಲಾಹುಪ್‌ನಲ್ಲಿ ಆಸ್ಟ್ರೇಲಿಯಾದ ಮಾರ್ವಾ ಇಬ್ರಾಹಿಂ 2017ರಲ್ಲಿ ಲಂಡನ್‌ನಲ್ಲಿ 27.26 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ನಿರ್ಮಿಸಿದ್ದ ಗಿನ್ನಿಸ್‌ ವಿಶ್ವದಾಖಲೆ ನಮ್ಮ ಮಗಳ ಸಾಧನೆಗೆ ಸ್ಫೂರ್ತಿಯಾಗಿದೆ. ಗಿನ್ನಿಸ್‌ ವಿಶ್ವ ದಾಖಲೆಗೆ ಹೆಸರು ಸೇರ್ಪಡೆಯಾಗಲು ಇನ್‌ಲೈನ್‌ ಸ್ಕೇಟಿಂಗ್‌ನ 3 ಹೂಲಾಹುಪ್‌ನಲ್ಲಿ 27 ಸೆಕೆಂಡ್‌ಗಳ ಒಳಗೆ ಗುರಿ ತಲುಪಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಇದಕ್ಕಿಂತಲೂ ಕಡಿಮೆ ಅವಧಿಯ ಒಳಗೆ ಸ್ತುತಿ ಗುರಿ ಮುಟ್ಟಿರುವ ಕಾರಣ ಗಿನ್ನಿಸ್‌ ವಿಶ್ವ ದಾಖಲೆ ಗೌರವ ಲಭಿಸುವುದು ಖಚಿತ. ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ’ ಎಂದು ಸ್ತುತಿ ಅವರ ತಾಯಿ ರಶ್ಮಿ ಕುಲಕರ್ಣಿ ಹೇಳಿದರು.

ADVERTISEMENT

‘ಅಪ್ಪ–ಅಮ್ಮನ ಪ್ರೋತ್ಸಾಹ ಮತ್ತು ಕೋಚ್‌ ಮಾರ್ಗದರ್ಶನದಿಂದ ಈ ದಾಖಲೆ ಮಾಡಲು ಸಾಧ್ಯವಾಗಿದೆ. ಮುಂದೆ ಇನ್ನಷ್ಟು ಸಾಧನೆಗಳನ್ನು ಮಾಡುತ್ತೇನೆ’ ಎಂದು ಸ್ತುತಿ ಹೇಳಿದಳು.

ನಗರದ ಪರಿವರ್ತನ ಗುರುಕುಲದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಸ್ತುತಿ, ಹುಬ್ಬಳ್ಳಿ ರೋಲರ್‌ ಸ್ಕೇಟಿಂಗ್‌ ಕ್ಲಬ್‌ ಕೋಚ್‌ ಅಕ್ಷಯ ಸೂರ್ಯವಂಶಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ. ನಾಲ್ಕು ವರ್ಷದವಳಾಗಿದ್ದಾಗಲೇ ಹವ್ಯಾಸಕ್ಕಾಗಿ ಹುಲಾಹೂಪ್‌ ಆರಂಭಿಸಿ ಈಗ ಸರಣಿ ದಾಖಲೆಗಳನ್ನು ಮಾಡುತ್ತಿದ್ದಾಳೆ.

2018ರಲ್ಲಿ ಸ್ತುತಿ ಇನ್‌ಲೈನ್‌ ಸ್ಕೇಟಿಂಗ್‌ನ ಒಂದು ಹುಲಾಹೂಪ್‌ನಲ್ಲಿ 11 ನಿಮಿಷ ಪ್ರದರ್ಶನ ನೀಡಿದ್ದಳು. ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅದೇ ವರ್ಷದ ಆಗಸ್ಟ್‌ನಲ್ಲಿ 42 ನಿಮಿಷ 12 ಸೆಕೆಂಡ್‌ ಸಾಹಸ ಪ್ರದರ್ಶಿಸಿದ್ದು ಗಮನ ಸೆಳೆದಿತ್ತು. ಈ ಎರಡೂ ಸಾಹಸಕ್ಕೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್‌, ವರ್ಲ್ಡ್‌ ರೆಕಾರ್ಡ್ಸ್‌ ಇಂಡಿಯಾ ಮತ್ತು ರೆಕಾರ್ಡ್‌ ಹಾಲಿಡೇ ರಿಪಬ್ಲಿಕ್‌ ಇಂಡಿಯಾ ಸೇರಿದಂತೆ ಹಲವು ದಾಖಲೆಗಳ ಗೌರವ ಲಭಿಸಿವೆ.

2019ರ ಜುಲೈನಲ್ಲಿ ಮೂರು ರಿಂಗ್‌ನ ಹೈ ವೀಲ್‌ ಇನ್‌ಲೈನ್‌ ಸ್ಕೇಟಿಂಗ್‌ನ ಹುಲಾಹೂಪ್‌ನಲ್ಲಿ ತೋರಿಸಿದ್ದ ಸಾಹಸಕ್ಕೆ ‘ವರ್ಲ್ಡ್‌ ರೆಕಾರ್ಡ್‌ ಇಂಡಿಯಾ’ ಸಂಸ್ಥೆಯ ದಾಖಲೆಯ ಮನ್ನಣೆ ಲಭಿಸಿತ್ತು. ದಾಖಲೆಯ ಉದ್ದೇಶದಿಂದಲೇ ಸ್ತುತಿ ಹುಲಾಹೂಪ್‌ನಲ್ಲಿ 9 ನಿಮಿಷ 27 ಸೆಕೆಂಡ್‌ಗಳಲ್ಲಿ ಪ್ರದರ್ಶನ ನೀಡಿ, ಮುಂಬೈನ ಜಶ್‌ ಸರೋದೆ ದಾಖಲೆ (7 ನಿಮಿಷ) ಅಳಿಸಿ ಹಾಕಿದ್ದಳು.

ಸ್ತುತಿ ತಂದೆ ಕಿಶೋರ ಕುಲಕರ್ಣಿ ಪ್ರತಿಕ್ರಿಯಿಸಿ ‘ಅಭ್ಯಾಸದ ಅವಧಿಯಲ್ಲಿ 25 ಸೆಕೆಂಡ್‌ಗಳ ಒಳಗೆ ಗುರಿ ತಲುಪುತ್ತಿದ್ದಳು. ಈಗ ಇದಕ್ಕಿಂತಲೂ ಕಡಿಮೆ ಸಮಯದಲ್ಲಿ ಗುರಿ ತಲುಪಿದ್ದಕ್ಕೆ ಖುಷಿಯಾಗಿದೆ. ‌ಎನ್‌ಐಎಸ್‌ ಕೋಚ್‌ ಸಂತೋಷ ಹೊಸಮನಿ ಮತ್ತು ರಾಷ್ಟ್ರೀಯ ಕ್ರೀಡಾಪಟು ಎಂ.ಟಿ. ಬಸವರಾಜ ಸ್ತುತಿ ಸಾಧನೆಯ ಸಮಯ ದಾಖಲಿಸಿಕೊಂಡಿದ್ದಾರೆ. ಈ ಪ್ರಯತ್ನವನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿದ್ದು,‌ ಗಿನ್ನಿಸ್ ವಿಶ್ವದಾಖಲೆ ಅಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.