ADVERTISEMENT

ಕಬ್ಬು ಬಾಕಿ ಪಾವತಿ | ವಿಧಾನಸೌಧದ ಮುಂದೆ ರೈತ ಅರೆಬೆತ್ತಲೆ ಧರಣಿ 

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 7:38 IST
Last Updated 4 ಜೂನ್ 2019, 7:38 IST
   

ಬೆಂಗಳೂರು:‘ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಬಿಲ್‌ ಕೊಡಿಸುವಂತೆ ಆಗ್ರಹಿಸಿ ರೈತರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಗಳ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದ ಎದುರು ಅರೆ ಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದ 67 ಸಕ್ಕರೆ ಕಾರ್ಖಾನೆಗಳು 2018–19ನೇ ಸಾಲಿನಲ್ಲಿ ಅಂದಾಜು 4 ಕೋಟಿ ಟನ್‌ ಕಬ್ಬು ನುರಿಸಿದ್ದು, ಕಬ್ಬು ಪೂರೈಸಿದ ರೈತರಿಗೆ ಎಂಆರ್‌ಪಿ ದರದ ಅನ್ವಯ ₹3 ಸಾವಿರ ಕೋಟಿ ಬಾಕಿ ಪಾವತಿ ಮಾಡಿಲ್ಲ. ಸರ್ಕಾರ ಕಬ್ಬು ಬಾಕಿ ಕೊಡಿಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬಾಕಿ ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಆರು ತಿಂಗಳಾದರು ಬಿಲ್ ಪಾವತಿಯಾಗಿಲ್ಲ. ವಾಸ್ತವವಾಗಿ ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಪ್ರಕಾರ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ 14 ದಿನಗಳ ಒಳಗಾಗಿ ಹಣ ಪಾವತಿಸಬೇಕು ಎಂಬ ನಿಯಮವಿದ್ದರೂ ಕಾರ್ಖಾನೆ ಮಾಲೀಕರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಆರು ತಿಂಗಳಾದರೂ ಸಕ್ಕರೆ ಸಕ್ಕರೆ ಕಾರ್ಖಾನೆ ಮಾಲೀಕರು ಹಣ ಪಾವತಿಸಿಲ್ಲ. ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಹೋರಾಟಕ್ಕಿಳಿದಿದ್ದೇವೆ ಎಂದರು.

ಎಸ್‌ಎಪಿ ಪ್ರಕಾರ ಕಬ್ಬಿನ ಉಪ ಉತ್ಪನ್ನಗಳಿಂದ ಬಂದ ಲಾಭದಲ್ಲಿ ರೈತರಿಗೂ ಹಂಚಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಸಕ್ಕರೆ ಆಯುಕ್ತರು ಹಾಗೂ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕುಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೀರಿಲ್ಲದೆ ಕಬ್ಬು ಬೆಳೆ ಒಣಗಿವೆ. ಜನರು ಗುಳೆ ಹೋಗುತ್ತಿದ್ದಾರೆ. ಅದನ್ನು ತಡೆದು, ಕಬ್ಬು ಬೆಳೆಗಾರರಿಗೆ ಸೂಕ್ತ ರೀತಿಯಲ್ಲಿ ವೈಜ್ಞಾನಿಕ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.