ADVERTISEMENT

ಟನ್‌ ಕಬ್ಬಿಗೆ ₹ 3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 15:30 IST
Last Updated 7 ನವೆಂಬರ್ 2025, 15:30 IST
<div class="paragraphs"><p>ಕುರುಬೂರು ಶಾಂತಕುಮಾರ್‌</p></div>

ಕುರುಬೂರು ಶಾಂತಕುಮಾರ್‌

   

ದಾವಣಗೆರೆ: ಪ್ರತಿ ಟನ್‌ ಕಬ್ಬು ಬೆಳೆಗೆ ಘೋಷಣೆ ಮಾಡಿದ ಕೇಂದ್ರ ಸಲಹಾ ಬೆಲೆ (ಎಫ್‌ಆರ್‌ಪಿ) ಅವೈಜ್ಞಾನಿಕವಾಗಿದೆ. ರಾಜ್ಯ ಸಲಹಾ ಬೆಲೆ ಕಾಯ್ದೆಯ ಪ್ರಕಾರ ಉಪ ಉತ್ಪನ್ನಗಳ ಲಾಭ ಲೆಕ್ಕಹಾಕಿ ಟನ್‌ ಕಬ್ಬಿಗೆ ₹ 3,500 ದರ ನಿಗದಿಪಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಒತ್ತಾಯಿಸಿದರು.

‘ಪ್ರತಿ ಟನ್‌ ಕಬ್ಬು ಬೆಳೆಯಲು ₹ 3,700 ವೆಚ್ಚವಾಗುತ್ತದೆ ಎಂಬುದಾಗಿ ಕೃಷಿ ಇಲಾಖೆಯು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ನೀಡಿದೆ. ರಾಜ್ಯ ಸರ್ಕಾರವು ಸಲಹಾ ಬೆಲೆ ನಿಗದಿಪಡಿಸುವ ಕಾಯ್ದೆಯ ನೆರವು ಪಡೆದು ಕಬ್ಬು ಬೆಳೆಗಾರರ ಹಿತ ಕಾಪಾಡಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

‘ಕಬ್ಬು ಬೆಳೆಯ ಖರ್ಚು ಹೆಚ್ಚಾಗಿದೆ. ಕಬ್ಬು ಬೆಳೆಗೆ ಎಫ್‌ಆರ್‌ಪಿ ನಿಗದಿಪಡಿಸುವಾಗ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಬೇಕು. ಬೆಳೆಗಾರರ ನೋವನ್ನು ಪ್ರಧಾನಿಯವರಿಗೆ ವಿವರಿಸಲು ಸಿದ್ಧರಿದ್ದೇವೆ’ ಎಂದರು.

‘ಕಬ್ಬು ತೂಕದಲ್ಲಿ ರೈತರಿಗೆ ಮೋಸವಾಗುತ್ತಿದೆ. ಈ ವಂಚನೆಯನ್ನು ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಎದುರು ತೂಕದ ಯಂತ್ರಗಳನ್ನು ಸರ್ಕಾರವೇ ಸ್ಥಾಪಿಸಬೇಕು. ಇಲ್ಲವಾದರೆ ರೈತರ ಹೊಲದಲ್ಲಿಯೇ ಕಬ್ಬು ತೂಕ ಮಾಡಿ ಬೆಲೆ ನಿಗದಿಪಡಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲಿವೆ. ಶಾಸಕರು, ಸಂಸದರು, ಸಚಿವರ ಒಡೆತನದ ಸಕ್ಕರೆ ಕಾರ್ಖಾನೆಗಳಲ್ಲಿಯೇ ರೈತರಿಗೆ ಅನ್ಯಾಯವಾಗುತ್ತಿದೆ. ಬೆಳೆಗಾರರ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ರೈತರ ಹೋರಾಟ ರಾಜ್ಯದಾದ್ಯಂತ ವಿಸ್ತರಣೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಮಳೆಯಿಂದಾಗಿ ಅಪಾರ ಬೆಳೆ ನಷ್ಟ ಸಂಭವಿಸಿದೆ. ಪಂಜಾಬ್‌ಗೆ ವಿಶೇಷ ಪ್ಯಾಕೇಜ್‌ ನೀಡಿರುವ ಮಾದರಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೂ ಪ್ಯಾಕೇಜ್ ಘೋಷಣೆ ಮಾಡಬೇಕು. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರು ಒತ್ತಡ ಹೇರಬೇಕು’ ಎಂದು ಮನವಿ ಮಾಡಿದರು.

‘ಪ್ರಕೃತಿ ವಿಕೋಪದಿಂದ ಸಂಭವಿಸುವ ಬೆಳೆಹಾನಿಗೆ ಸರ್ಕಾರ ಬಿಡುಗಡೆ ಮಾಡುವ ಪರಿಹಾರ ಅತ್ಯಲ್ಪ. 8 ವರ್ಷಗಳಿಂದ ಈ ಪರಿಹಾರ ಪರಿಷ್ಕರಣೆಯಾಗಿಲ್ಲ. ಸರ್ಕಾರಿ ನೌಕರರ ವೇತನ ಪ್ರತಿ ವರ್ಷ ಏರಿಕೆಯಾಗುತ್ತದೆ. ಜನಪ್ರತಿನಿಧಿಗಳ ವೇತನ ಕೂಡ ಹೆಚ್ಚಳವಾಗುತ್ತದೆ. ರೈತರ ಬಗೆಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಮಾನದಂಡ ಪರಿಷ್ಕರಣೆ ಮಾಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ರೈತ ಮುಖಂಡರಾದ ಅಂಜ್ಜನಪ್ಪ ಪೂಜಾರ, ಬರಡನಪುರ ನಾಗರಾಜ್, ದೇವಕುಮಾರ್, ಮಲ್ಲಿಕಾರ್ಜುನ್, ಪರಶುರಾಮ ಹಾಜರಿದ್ದರು.

ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ಶೀಘ್ರವೇ ತೆರೆಯಬೇಕು. ಬೆಂಬಲ ಬೆಲೆ ₹ 2,369 ನಿಗದಿಪಡಿಸಲಾಗಿದ್ದು, ಹೆಚ್ಚುವರಿಯಾಗಿ ₹ 500 ಪ್ರೋತ್ಸಾಹ ಧನ ನೀಡಬೇಕು
ಕುರುಬೂರು ಶಾಂತಕುಮಾರ್‌, ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

18ರಿಂದ ಚಳವಳಿ: ಎಚ್ಚರಿಕೆ

ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ₹ 2,400 ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ಇಲ್ಲವಾದರೆ ನ.18ರಿಂದ ಹೊನ್ನಾಳಿ ತಾಲ್ಲೂಕಿನಿಂದ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಹಸಿರು ಸೇನೆಯ ಅಧ್ಯಕ್ಷ ಕರಿಬಸಪ್ಪ ಎಚ್ಚರಿಕೆ ನೀಡಿದರು.

‘ಮೆಕ್ಕೆಜೋಳವನ್ನು ಆಹಾರ ಪದಾರ್ಥಗಳ ಪಟ್ಟಿಯಿಂದ ಕೈಬಿಟ್ಟಿರುವ ಕೇಂದ್ರ ಸರ್ಕಾರದ ಕ್ರಮ ಅವೈಜ್ಞಾನಿಕ. ರೈತರ ಹಿತ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಅವರ ಸೂತ್ರಕ್ಕೆ ಒಪ್ಪಿಗೆ ಇಲ್ಲ; ರೈತರ ಅಹೋರಾತ್ರಿ ಪ್ರತಿಭಟನೆ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ, ಶೇ 11.25 ರಿಕವರಿ ಇರುವ ಕಬ್ಬಿಗೆ ₹3,300 ಬೆಲೆ ನೀಡುವ ತೀರ್ಮಾನವನ್ನು ಇಲ್ಲಿನ ರೈತರು ಒಪ್ಪಿಕೊಳ್ಳದೇ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ.

‘ಈ ಭಾಗದ ಕಬ್ಬಿನ ಇಳುವರಿ ಕಡಿಮೆ ಇರುವುದರಿಂದ ಪರಿಷ್ಕೃತ ಬೆಲೆ ಸಿಗುವುದಿಲ್ಲ. ಇಲ್ಲಿನ ಕಾರ್ಖಾನೆಯವರು ಸ್ಥಳಕ್ಕೆ ಬಂದು ಗರಿಷ್ಠ ಬೆಲೆ ಪ್ರಕಟಿಸುವವರೆಗೆ ಪ್ರತಿಭಟನೆ ಮುಂದುವರಿಸುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಹೇಳಿದ ಪ್ರತಿಭಟನಾನಿರತ ರೈತರು, ರಾತ್ರಿ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ಮಲಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.