
ಹೂವಿನ ಹಡಗಲಿಯಲ್ಲಿ ಮುಂದುವರೆದ ರೈತರ ಧರಣಿ
ಹೂವಿನ ಹಡಗಲಿ (ವಿಜಯನಗರ ಜಿಲ್ಲೆ): ಈ ಭಾಗದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,500 ಬೆಲೆ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿದಿರುವ ರೈತರು, ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್ ಬಳಿ ಶುಕ್ರವಾರ ಅಹೋರಾತ್ರಿ ಧರಣಿ ನಡೆಸಿದರು.
ಕಾರ್ಖಾನೆಯಲ್ಲಿ ಕಬ್ಬು ಅರೆಯುವುದನ್ನು ಬಂದ್ ಮಾಡಿಸಿ ಪ್ರತಿಭಟನೆ ಆರಂಭಿಸಿರುವ ರೈತರು, ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಶನಿವಾರವೂ ಧರಣಿ ಮುಂದುವರಿಸಿದರು.
‘ರಾಜ್ಯ ಸರ್ಕಾರ ಕಬ್ಬು ಬೆಲೆಯನ್ನು ₹3,300ಕ್ಕೆ ಪರಿಷ್ಕರಿಸಿರುವುದರಿಂದ ಪ್ರತಿಭಟನೆ ಅಂತ್ಯಗೊಳಿಸಿ’ ಎಂದು ತಹಶೀಲ್ದಾರ್ ಜಿ. ಸಂತೋಷಕುಮಾರ್, ಸಿಪಿಐ ದೀಪಕ್ ಬೂಸರೆಡ್ಡಿ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಪ್ರತಿಭಟನಕಾರರು ಒಪ್ಪದೇ ರಾತ್ರಿಯೂ ಪ್ರತಿಭಟನೆ ಸ್ಥಳದಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ಧರಣಿ ಮುಂದುವರಿಸಿದರು. ಹೊಳಲು, ಕತ್ತೆಬೆನ್ನೂರಿನ ಎರಡು ಭಜನಾ ತಂಡಗಳನ್ನು ರೈತರು ಆಹ್ವಾನಿಸಿ ಬೆಳಗಿನಜಾವ 4 ಗಂಟೆವರೆಗೆ ಭಜನೆ ಮಾಡಿದರು. ಪ್ರತಿಭಟನಕಾರರು ರಾತ್ರಿಯಿಡೀ ಜಾಗರಣೆ ಮಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆ ನಡೆಸಿ ಕೈಗೊಂಡಿರುವ ತೀರ್ಮಾನ ಬೆಳಗಾವಿ, ವಿಜಯಪುರ ಕೇಂದ್ರಿತವಾಗಿದೆ. ಆ ಜಿಲ್ಲೆಗಳಲ್ಲಿ ಕಬ್ಬು ಇಳುವರಿ ಪ್ರಮಾಣ 11ರ ಮೇಲ್ಪಟ್ಟು ಬರುವುದರಿಂದ ಅಲ್ಲಿನ ರೈತರಿಗೆ ₹3,300 ದರ ಸಿಗಲಿದೆ. ವಿಜಯನಗರ, ಗದಗ, ಹಾವೇರಿ ಭಾಗದ ಕಬ್ಬು ಇಳುವರಿ 9 ಕ್ಕಿಂತ ಕಡಿಮೆ ಇರುವುದರಿಂದ ನಮಗೆ ₹3,000 ಸಿಗುವುದಿಲ್ಲ. ನಮ್ಮ ಭಾಗದ ಸರಾಸರಿ ರಿಕವರಿ ದರ ಆಧರಿಸಿ ಗರಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ರತ್ನಭಾರತ ರೈತ ಸಮಾಜದ ಅಧ್ಯಕ್ಷ ಕೋಡಬಾಳ ಹನುಮಂತಪ್ಪ ಆಗ್ರಹಿಸಿದರು.
‘ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಕಬ್ಬು ಇಳುವರಿ ಕಡಿಮೆ ಬರುವ ಜಿಲ್ಲೆಗಳ ಬಗ್ಗೆ ಪ್ರಸ್ತಾಪವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ನಮ್ಮ ಭಾಗದ ಕಬ್ಬಿಗೆ ಗರಿಷ್ಠ ಬೆಲೆ ನಿಗದಿಪಡಿಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ’ ಎಂದು ಹನುಮಂತಪ್ಪ ತಿಳಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬೆನ್ನೂರು ಹಾಲೇಶ, ಮುದ್ದಿ ಮಹೇಂದ್ರಪ್ಪ, ಎಚ್.ಡಿ.ಜಗ್ಗಿನ, ಪುನೀತ್ ದೊಡ್ಡಮನಿ, ಬಸವರಾಜ, ಎಚ್.ಮಂಜುನಾಥ, ಅಶೋಕ ಬಳಗಾನೂರು, ಎಚ್.ಪ್ರವೀಣ, ಅಂಬ್ಲಿ ಪ್ರಕಾಶ, ಮಲ್ಲಪ್ಪ ಕೋಡಬಾಳ, ಪಕ್ಕೀರಶೆಟ್ರು ಯಲಗಚ್ಚಿನ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.