ADVERTISEMENT

ಸುಹಾಸ್ ಶೆಟ್ಟಿ ಮೇಲೆ 5 ಕೇಸ್‌ ಇವೆ. ಹೀಗಾಗಿ ಮನೆಗೆ ಭೇಟಿ ಕೊಟ್ಟಿಲ್ಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 4 ಮೇ 2025, 8:34 IST
Last Updated 4 ಮೇ 2025, 8:34 IST
<div class="paragraphs"><p>ಜಿ. ಪರಮೇಶ್ವರ, ಗೃಹ ಸಚಿವ</p></div>

ಜಿ. ಪರಮೇಶ್ವರ, ಗೃಹ ಸಚಿವ

   

ಬೆಂಗಳೂರು: ‘ಮಂಗಳೂರಿನ ಬಜಪೆ ಬಳಿ ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ಗಳಿವೆ. ಹೀಗಾಗಿ ನಾವು ಯಾರೂ ಅವರ ಮನೆಗೆ ಭೇಟಿ ಕೊಟ್ಟಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುಹಾಸ್ ಶೆಟ್ಟಿ ಕುಟುಂಬವನ್ನು ಸರ್ಕಾರದ ಪರವಾಗಿ ಭೇಟಿ ಮಾಡಿ ಯಾರೂ ಸಾಂತ್ವನ ಹೇಳದಿರುವ ಕುರಿತು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ’ ಎಂದರು.

ADVERTISEMENT

‘ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತರು ನಿಜವಾದ ಆರೋಪಿಗಳೇ’ ಎಂಬ ಅನುಮಾನ ವ್ಯಕ್ತವಾಗಿರುವ ಬಗ್ಗೆ ಮಾತನಾಡಿದ ಅವರು, ‌‘ಯಾರನ್ನೋ ಆರೋಪಿ ಎಂದು ಹೇಳಲು ಆಗುತ್ತದೆಯೇ? ಕೊಲೆ ಪ್ರಕರಣದಲ್ಲಿ ಯಾರ‍್ಯಾರನ್ನೊ ಬಂಧಿಸಲು ಆಗುವುದಿಲ್ಲ’ ಎಂದರು.

ಮುಸ್ಲಿಂ ಸಮುದಾಯದ ಮುಖಂಡರು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಸ್ಲಿಂ ಸಮುದಾಯದ ಪ್ರಮುಖರು ಅವರೇ ಬಂದು ನನ್ನನ್ನು ಭೇಟಿ ಮಾಡಿದರು. ಭೇಟಿ ಮಾಡಲು ಬರುವವರಿಗೆ ಬೇಡ ಎಂದು ಹೇಳಲು ಆಗುತ್ತದೆಯೇ? ಬೇರೆ ಸಮುದಾಯದವರೂ ಬರಬಹುದಿತ್ತು. ಆದರೆ, ಯಾರೂ ಬರಲಿಲ್ಲ’ ಎಂದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲು ಬಿಜೆಪಿ ನಾಯಕರ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಅದು ಬಿಜೆಪಿಯವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಈ ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ’ ಎಂದು ಸಮರ್ಥನೆ ನೀಡಿದರು.

‘ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಬಿಜೆಪಿ ಆರೋಪ ಸರಿಯಲ್ಲ, ಬಿಜೆಪಿಯವರ ಕಾಲದಲ್ಲೂ ಕೊಲೆಗಳು ಆಗಿವೆ’ ಎಂದರು.

ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಕೊಲೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ‘ನಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕೊಲೆ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದರೆ ತಡೆಯುವ ಕೆಲಸ ಆಗುತ್ತಿದೆ. ಕೊಲೆ ನಂತರವೂ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಎಲ್ಲ ಎಚ್ಚರಿಕೆ, ಸೂಚನೆಯನ್ನು ಎಸ್‌ಪಿಗಳಿಗೆ ಕೊಟ್ಟಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.