ADVERTISEMENT

ಮಹದಾಯಿ-ಕೋಟಿಗಾಂವ್ ಪ್ರದೇಶ: ಅಭಿವೃದ್ಧಿ ಯೋಜನೆಗಳಿಗೆ ಸುಪ್ರೀಂ ಕೋರ್ಟ್ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 14:29 IST
Last Updated 9 ಸೆಪ್ಟೆಂಬರ್ 2025, 14:29 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಹದಾಯಿ-ಕೋಟಿಗಾಂವ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಧಾಮವು ಕಾಳಿ ಹುಲಿ ಮೀಸಲು ಪ್ರದೇಶ, ಭೀಮಘಡ ವನ್ಯಜೀವಿಧಾಮ ಮತ್ತು ಭಗವಾನ್‌ ಮಹಾವೀರ ರಾಷ್ಟ್ರೀಯ ಉದ್ಯಾನ ಒಳಗೊಂಡಂತೆ ಭೌಗೋಳಿಕವಾಗಿ ಕರ್ನಾಟಕದ ಜೊತೆಗೆ ಬೆಸೆದುಕೊಂಡಿದೆ.

ವನ್ಯಜೀವಿಧಾಮದಲ್ಲಿ ವಾಣಿಜ್ಯ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಗೋವಾ ಫೌಂಡೇಷನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ನಿರ್ದೇಶನ ನೀಡಿತು. 

ADVERTISEMENT

ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಪಕ್ಕದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅಧಿಸೂಚನೆ ಹೊರಡಿಸುವ ಸಂಬಂಧ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಆರು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಬಳಿಕ ವಿಚಾರಣೆಯನ್ನು ಎಂಟು ವಾರ ಮುಂದೂಡಿದೆ. 

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಮಹದಾಯಿಯಲ್ಲಿ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಹಕ್ಕು ಹೊಂದಿವೆ. ಆದರೆ, ಅದಕ್ಕೆ ಪರಿಸರ ಮತ್ತು ಅರಣ್ಯ ಅನುಮತಿಗಳನ್ನು ಪಡೆಯಬೇಕಿದೆ. ಗೋವಾ ಸರ್ಕಾರ ಮತ್ತು ಅಲ್ಲಿನ ಪರಿಸರವಾದಿಗಳ ನಡುವಿನ ಹೋರಾಟವು ಕರ್ನಾಟಕದ ಮೇಲೆ ನೇರ ಪರಿಣಾಮ ಬೀರುವುದಿಲ್ಲ
ಮೋಹನ್‌ ಕಾತರಕಿ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ

‍ಮಹದಾಯಿ ವನ್ಯಜೀವಿಧಾಮ ಹಾಗೂ ಆಸುಪಾಸಿನ ಪ್ರದೇಶಗಳನ್ನು ‘ಹುಲಿ ಸಂರಕ್ಷಣಾ ಮೀಸಲು ಅರಣ್ಯ’ವೆಂದು ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗೋವಾ ಸರ್ಕಾರಕ್ಕೆ 2023ರಲ್ಲಿ ನಿರ್ದೇಶನ ನೀಡಿತ್ತು. 

ವನ್ಯಜೀವಿಧಾಮ ಹಾಗೂ ಸಮೀಪದ ಅರಣ್ಯ ಭಾಗದಲ್ಲಿ ಜನವಸತಿಗಳಿವೆ ಹಾಗೂ ಹುಲಿ ಗೋವಾದ ಸ್ಥಳೀಯ ವನ್ಯಜೀವಿಯಲ್ಲ ಎಂಬ ಕಾರಣ ನೀಡಿ ಮೀಸಲು ಅರಣ್ಯವಾಗಿ ಘೋಷಿಸಲು ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. 

ಕರ್ನಾಟಕ, ಮಹಾರಾಷ್ಟ್ರದ ಪಶ್ಚಿಮಘಟ್ಟದ ಅರಣ್ಯ ಭಾಗಗಳ ಜೊತೆಗೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ಮಹದಾಯಿ ವನ್ಯಜೀವಿ ಧಾಮದಲ್ಲಿ ಕೆಲವು ಹುಲಿಗಳು ಕಾಣಿಸಿಕೊಂಡಿದ್ದವು. ಇದನ್ನು ಹುಲಿ ಮೀಸಲು ಪ್ರದೇಶವಾಗಿ ಘೋಷಿಸಬೇಕು ಎಂಬ ಬೇಡಿಕೆ ಎದ್ದಿತ್ತು. ಕೆಲವು ವರ್ಷಗಳ ಹಿಂದೆ ಮಹದಾಯಿ ವನ್ಯಜೀವಿ ಧಾಮದಲ್ಲಿ ನಾಲ್ಕು ಹುಲಿಗಳ ಹತ್ಯೆಯಾಗಿತ್ತು.

ಈ ಸಂಬಂಧ ವರದಿ ನೀಡಿದ್ದ ಎನ್‌ಟಿಸಿಎ, ಕರ್ನಾಟಕ ಮತ್ತು ಗೋವಾದಲ್ಲಿ ವ್ಯಾಪಿಸಿರುವ ಈ ಪ್ರದೇಶವು ಹುಲಿ ಸಂತತಿ ವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇದನ್ನು ಮೀಸಲು ಅರಣ್ಯವಾಗಿ ಘೋಷಿಸಬೇಕು ಎಂದು ಸಲಹೆ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.