
ನವದೆಹಲಿ: ಕಲಬುರಗಿಯ ಆಳಂದಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಹಾಗೂ ಹಿಂದೂ ಸಂತ ರಾಘವ ಚೈತನ್ಯ ಅವರ ಸಮಾಧಿಯಲ್ಲಿ ಮಹಾ ಶಿವರಾತ್ರಿ ಪೂಜೆಗೆ ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠ, ಪ್ರಕರಣ ಕರ್ನಾಟಕ ಹೈಕೋರ್ಟ್‌ನಲ್ಲಿರುವುದರಿಂದ ಅರ್ಜಿದಾರರು ಸಂವಿಧಾನದ 32ನೇ ವಿಧಿಯನ್ನು ಬಳಸಿಕೊಳ್ಳುವಂತಿಲ್ಲ ಎಂದು ಹೇಳಿದೆ.
ಸದರಿ ಆಸ್ತಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯಬೇಕು, ಆಸ್ತಿಗೆ ಕಾನೂನುಬಾಹಿರವಾಗಿ ಪ್ರವೇಶಿಸುವುದು, ಗುಂಪುಗೂಡುವುದು ಅಥವಾ ಒಟ್ಟುಗೂಡುವುದನ್ನು ತಡೆಯಬೇಕು.ಪೂಜೆ ಮತ್ತು ಪ್ರವೇಶಕ್ಕೆ ಅನುಮತಿ ನೀಡುವ ಯಾವುದೇ ಮಧ್ಯಂತರ ಆದೇಶಗಳನ್ನು ನಿರ್ಬಂಧಿಸಬೇಕು ಎಂದು ಕೋರಿ ಖಲೀಲ್ ಅನ್ಸಾರಿ ಎನ್ನುವವರು ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ವಿಭಾ ದತ್ತಾ, ಈ ಬಗ್ಗೆ ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ ಎಂದು ಪೀಠದ ಮುಂದೆ ಅರುಹಿದರು.
ಆಸ್ತಿಯನ್ನು ಈಗಾಗಲೇ ವಕ್ಫ್ ಬೋರ್ಟ್ ನೋಟಿಫೈ ಮಾಡಿದ್ದು, ವಕ್ಫ್ ನ್ಯಾಯಾಧೀಕರಣವೇ ಇದನ್ನು ತೀರ್ಮಾನ ಮಾಡಬೇಕು ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ ಎಂದು ಕೋರ್ಟ್ ಹೇಳಿತು.
ಈ ಪ್ರಕರಣವು ಪೂಜಾ ಸ್ಥಳಗಳ ಕಾಯ್ದೆಗೂ ಸಂಬಂಧಿಸಿದ್ದಾಗಿದ್ದು, ಈ ಸಂಬಂಧ ದಾಖಲಾಗಿರುವ ಪ್ರಕರಣಗಳಲ್ಲಿ ಇದನ್ನೂ ಜೋಡಿಸಬಹುದು ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಹೇಳಿದರು.
ಮಧ್ಯಪ್ರವೇಶಿಸಲು ನಿರಾಕರಿಸಿದ ಕೋರ್ಟ್, ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿತು.
15 ಮಂದಿಗೆ ಮಹಾಶಿವರಾತ್ರಿ ಪೂಜೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.