ADVERTISEMENT

ಸರ್ಕಾರಕ್ಕೆ ನೈತಿಕತೆ ಇಲ್ಲ, ಬಿಎಸ್‌ವೈ ರಾಜೀನಾಮೆ ನೀಡಲಿ: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 10:42 IST
Last Updated 13 ನವೆಂಬರ್ 2019, 10:42 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ರಾಯಚೂರು: ಕಾಂಗ್ರೆಸ್‌ಗೆ ದ್ರೋಹ ಮಾಡಿರುವ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್‌ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಬಿಜೆಪಿ ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಒತ್ತಾಯಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಸರ್ಕಾರವನ್ನು ಬೀಳಿಸುವ ದುರುದ್ದೇಶದಿಂದ ಅತೃಪ್ತ ಶಾಸಕರು ಷಡ್ಯಂತ್ರ ರೂಪಿಸಿದ್ದರು. ಅವರ ನಡವಳಿಕೆ ಸಂವಿಧಾನ ಬಾಹಿರವಾಗಿತ್ತು. ಸಂವಿಧಾನದ 10ನೇ ವಿಧಿ ಪ್ರಕಾರ ಶಾಸಕರು ನಡೆದುಕೊಂಡಿಲ್ಲ. ಹೀಗಾಗಿ ಅನರ್ಹಗೊಳಿಸಿದ ಸ್ಪೀಕರ್‌ ನಿರ್ಧಾರ ಸರಿಯಾಗಿದೆ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಶಾಸಕರ ಅನರ್ಹತೆ ಕುರಿತಾಗಿ ಸುಪ್ರೀಂಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಶಾಸಕರ ಅನರ್ಹತೆಯನ್ನು ಸ್ಪೀಕರ್‌ ವ್ಯಾಖ್ಯಾನಿಸುವಾಗ, ಅವರು ಮರು ಚುನಾವಣೆಗೆ ನಿಂತುಕೊಳ್ಳಬಾರದು ಎಂದು ಹೇಳಿದ್ದರು. ಈ ವ್ಯಾಖ್ಯಾನಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇರಲಿಲ್ಲ. ಆದರೆ, ಸ್ಪೀಕರ್‌ ನಿರ್ಧಾರಕ್ಕೆ ಬೆಂಬಲ ಸೂಚಿಸಲಾಗಿತ್ತು. ಮರು ಚುನಾವಣೆಗೆ ಹೋಗುವುದು, ಬಿಡುವುದು ಅನರ್ಹ ಶಾಸಕರಿಗೆ ಬಿಟ್ಟಿರುವ ವಿಚಾರ. ಕಾಂಗ್ರೆಸ್‌ಗೆ ಅವರು ಎದುರಾಳಿ ಆಗುತ್ತಾರೆ ಎನ್ನುವುದು ಮೊದಲಿನಿಂದಲೂ ಗೊತ್ತಿರುವ ಸಂಗತಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.