ADVERTISEMENT

ಬಿಎಸ್‌ವೈ ಪ್ರಕರಣ: ಆದೇಶಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 15:48 IST
Last Updated 17 ಜನವರಿ 2025, 15:48 IST
<div class="paragraphs"><p> ಬಿಎಸ್‌ವೈ</p></div>

ಬಿಎಸ್‌ವೈ

   

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿರುದ್ಧ ಮೊಕದ್ದಮೆ ಹೂಡಲು ಪೂರ್ವಾನುಮತಿ ಪಡೆಯುವ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿರುವ ಆದೇಶಗಳ ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ. 

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಡಿನೋಟಿಫಿಕೇಷನ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರ ಪೀಠವು, ಕಾನೂನಾತ್ಮಕ ವಿಶ್ಲೇಷಣೆಗೆ ಶಿಫಾರಸು ಮಾಡಿದ ಆದೇಶಗಳ ಕುರಿತು ಸ್ಪಷ್ಟನೆ ಕೋರಿದೆ. 

ADVERTISEMENT

ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಸಂಕ್ಷಿಪ್ತ ವಿವರಣೆಗಳೊಂದಿಗೆ ಪ್ರತ್ಯೇಕ ‍ಪಟ್ಟಿ ಸಲ್ಲಿಸುವಂತೆ ಯಡಿಯೂರಪ್ಪ ಪರ ಹಾಜರಿದ್ದ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ಅವರಿಗೆ ಪೀಠ ಸೂಚಿಸಿದೆ. 

‘ನಾವೊಂದು ಪಟ್ಟಿ ತಯಾರಿಸುತ್ತೇವೆ. ಇವೆಲ್ಲ ಪ್ರತ್ಯೇಕ ಪ್ರಕರಣಗಳು. ಇವೆಲ್ಲ ಒಟ್ಟಿಗೆ ಏಕೆ ಸೇರಿಸಲ್ಪಟ್ಟಿವೆ ಎಂಬುದು ನನಗೆ ತಿಳಿಯುತ್ತಿಲ್ಲ. ಇದರಲ್ಲಿ ಪ್ರತ್ಯೇಕ ಕಾನೂನುಗಳು ಒಳಗೊಂಡಿವೆ. ಇಲ್ಲಿ ಐದು ವಿಭಿನ್ನ ಪ್ರಕರಣಗಳಿವೆ’ ಎಂದು ಲೂತ್ರಾ ಹೇಳಿದರು. 

‘ನಾವು ಇದರಲ್ಲಿನ ಕಾನೂನಾತ್ಮಕ ವಿಚಾರಗಳನ್ನು ನಿರ್ಧರಿಸುತ್ತೇವೆ. ಶಿಫಾರಸು, ಆದೇಶಗಳು ಹಾಗೂ ವಾದ ಪ್ರತಿವಾದಗಳನ್ನು ಪರಿಗಣಿಸಿ ಹಂತ ಹಂತವಾಗಿ ಮುಂದುವರಿಯುತ್ತೇವೆ’ ಎಂದು ಹೇಳಿ ಪೀಠವು ವಿಚಾರಣೆಯನ್ನು ಫೆ.28ಕ್ಕೆ ಮುಂದೂಡಿತು. 

ಯಡಿಯೂರಪ್ಪ ಪ್ರಕರಣವನ್ನು ವಿಶ್ಲೇಷಿಸಿದ ಲೂತ್ರಾ, ‘ಕೆಲವು ಪ್ರಕರಣದ ಭೂಮಿಯನ್ನು ವಾಪಸ್‌ ಪಡೆಯಲಾಗಿತ್ತು. ಎಫ್‌ಐಆರ್ ದಾಖಲಾಗಿತ್ತು. ಆ ಸಂದರ್ಭದಲ್ಲಿ ಆರೋಪಿಯು ಜನಪ್ರತಿನಿಧಿಯಾಗಿದ್ದರು. ಆದರೆ, ಅದಕ್ಕೆ ಪೂರ್ವಾನುಮತಿ ಇಲ್ಲದ ಕಾರಣ ಹೈಕೋರ್ಟ್‌ ನ್ಯಾಯಪೀಠವು ಪ್ರಕರಣವನ್ನು ರದ್ದುಗೊಳಿಸಿತ್ತು. ಆ ಆದೇಶವನ್ನು ಪ್ರಶ್ನಿಸಲಾಗಿತ್ತು. ನಂತರ, ಅದೇ ರೀತಿಯ ಮತ್ತೊಂದು ದೂರು ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯ ಅದನ್ನು ರದ್ದುಗೊಳಿಸಿತ್ತು. ಆ ಬಳಿಕ, ಹೈಕೋರ್ಟ್ ಆ ಆದೇಶವನ್ನು ವಜಾಗೊಳಿಸಿತ್ತು’ ಎಂದರು. 

ಹಿರಿಯ ವಕೀಲ ವಿಕಾಸ್‌ ಸಿಂಗ್ ಅವರು ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಲು ಅನುಮತಿ ಕೇಳಿದರು. ಆಗ ಲೂತ್ರಾ ವಿರೋಧಿಸಿದರು. ‘ಇದು ಕ್ರಿಮಿನಲ್‌ ಪ್ರಕರಣ. ಇದರಲ್ಲಿ ರಾಜ್ಯ ಸರ್ಕಾರ ಪ್ರತಿವಾದಿ ಅಲ್ಲ’ ಎಂದು ಅವರು ಹೇಳಿದರು. 

ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ ಪರವಾಗಿ ವಾದ ಮಂಡಿಸಲು ಅನುಮತಿ ಕೇಳಿದರು. 

ಯಡಿಯೂರಪ್ಪ ವಿರುದ್ಧದ ಪ್ರಕರಣಗಳಲ್ಲಿ ನ್ಯಾಯಾಂಗ ಪಕ್ಷಪಾತ ತೋರುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ವಕೀಲ ಸಚಿನ್ ಎಸ್. ದೇಶಪಾಂಡೆ ಅವರು ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ವಿಷಯವನ್ನು ಲುತ್ರಾ ಪ್ರಸ್ತಾಪಿಸಿದರು. ‘ಇದನ್ನು ಕಸದ ಬುಟ್ಟಿಗೆ ಎಸೆಯಬೇಕು’ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.