ADVERTISEMENT

Swadesh Darshan | ಹಂಪಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯ: ಪ್ರಧಾನಿ ಅಡಿಗಲ್ಲು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 11:01 IST
Last Updated 7 ಮಾರ್ಚ್ 2024, 11:01 IST
   

ಹೊಸಪೇಟೆ (ವಿಜಯನಗರ): ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಆಧುನಿಕ ಶೌಚಾಲಯ, ವಿಶ್ರಾಂತಿ ಕೊಠಡಿ, ಲಗೇಜು ಕೊಠಡಿ ಸಹಿತ ಅಗತ್ಯದ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದರು.

ಕೇಂದ್ರದ ಸ್ವದೇಶ ದರ್ಶನ್‌ 2.0 ಯೋಜನೆಯಡಿ ಮಂಜೂರಾಗಿರುವ ₹70 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಇದಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಸಾರ್ವಜನಿಕ ಸಭೆಯಿಂದಲೇ ವರ್ಚುವಲ್‌ ಆಗಿ ಪ್ರಧಾನಿ ಅವರು ಈ ಅಡಿಗಲ್ಲು ಕಾರ್ಯಕ್ರಮ ನಡೆಸಿಕೊಟ್ಟರು. ಕಾಶ್ಮೀರ ಸಹಿತ ದೇಶದ ವಿವಿಧ ಭಾಗಗಳಲ್ಲಿ ₹6,400 ಕೋಟಿ ವೆಚ್ಚದ 53 ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಿದರು. ರಾಜ್ಯದಲ್ಲಿ ಹಂಪಿಯ ಜತೆಗೆ ಮೈಸೂರು ಈ ಯೋಜನೆಯಲ್ಲಿ ಸೇರ್ಪಡೆಯಾಗಿದೆ.

ಪ್ರವಾಸಿಗರಿಗೆ ನೀಡುವ ಅಗತ್ಯದ ಸೌಲಭ್ಯಗಳಲ್ಲಿ ಶೌಚಾಲಯಗಳೇ ಪ್ರಮುಖವಾದವುಗಳು. ಇಂಪೀರಿಯಲ್‌, ರಾಯಲ್‌ ಮತ್ತು ನೋಬಲ್‌ ಎಂಬ ಮೂರು ವಿಭಾಗಗಳನ್ನು ಮಾಡಿ ಹಂಪಿ ಹಾಗೂ ಹಂಪಿಯ ಸುತ್ತಮುತ್ತ, ಕಮಲಾಪುರ, ಹೊಸಪೇಟೆ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಸಮೀಪ, ತುಂಗಭದ್ರಾ ಅಣೆಕಟ್ಟು ಸಮೀಪ ಸುಮಾರು 27 ಕಡೆಗಳಲ್ಲಿ ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು, ಲಗ್ಗೇಜು ಕೊಠಡಿಗಳನ್ನು ನಿರ್ಮಿಸುವುದು ಈ ಯೋಜನೆಯ ಪ್ರಮುಖ ಅಂಶ. ₹70 ಕೋಟಿ ಅನುದಾನದ ಪೈಕಿ ₹ 26 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆಯೂ ಮುಗಿದಿದೆ. ಹೀಗಾಗಿ ಕಾಮಗಾರಿಗಳು ಶೀಘ್ರದಲ್ಲಿ ಆರಂಭವಾಗಲಿವೆ.

ADVERTISEMENT

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಬಳ್ಳಾರಿ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲು ₹8,000 ಕೋಟಿಗೂ ಅಧಿಕ ಹಣವನ್ನು ತರಿಸಿದ್ದು ಹಾಗೂ ಬಹುತೇಕ ಕಾಮಗಾರಿ ಕೊನೆಗೊಳಿಸಿದ್ದು ತಮ್ಮ ಸಾಧನೆ ಎಂದರು. 

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಜತೆಗೆ ಅರಂಭಿಕ ಹಂತದಲ್ಲೇ ಚರ್ಚಿಸಿ, ಪರಿಶೀಲನೆ ನಡೆಸಿ ಯೋಜನೆ ರೂಪಿಸಿದ ಕಾರಣಕ್ಕೆ ಹಂಪಿಯಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ  ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಿರುವ ಈ ಯೋಜನೆಗಳು ಶೀಘ್ರ ಕಾರ್ಯಗತಗೊಳ್ಳಲಿವೆ. ಇನ್ನು ಮುಂದೆ ಹಂಪಿಗೆ ಬರುವ ಪ್ರವಾಸಿಗರಿಗೆ ರೈಲು ನಿಲ್ದಾಣದಿಂದಲೇ ಶೌಚಾಲಯದಂತಹ ಅಗತ್ಯ ಸೌಲಭ್ಯಗಳು ಸಿಗಲಿವೆ. ಶೌಚ, ಸ್ನಾನದ ಕಾರಣಕ್ಕೆ ಹೋಟೆಲ್‌ ಕೊಠಡಿ ಪಡೆಯುವ ಪ್ರಮೇಯ ತಪ್ಪಲಿದೆ ಎಂದರು.

‘ಐಎಎಸ್‌ ಅಧಿಕಾರಿಗಳಿಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬ ಬಯಕೆ ಸದಾ ಇರುತ್ತದೆ, ಏಕೆಂದರೆ ದಸರಾ ಏರ್ಪಡಿಸುವ ಅವಕಾಶಕ್ಕಾಗಿ  ಅವರು ಎದುರು ನೋಡುತ್ತಿರುತ್ತಾರೆ. ಮೈಸೂರು ದಸರಾ ಆರಂಭವಾದುದು ಹಂಪಿಯಲ್ಲಿ. ಈ ಬಾರಿ ಹಂಪಿ ಉತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ. ಹೀಗಾಗಿ ವಿಜಯನಗರ ಜಿಲ್ಲಾಧಿಕಾರಿ ಆಗುವುದು ಸಹ ಸೌಭಾಗ್ಯವೆಂದು ತಿಳಿಯುವ ಕಾಲ ಬಂದಿದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠ ಶ್ರೀಹರಿಬಾಬು ಬಿ.ಎಲ್‌., ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮ) ಆಯುಕ್ತ ಮೊಹಮ್ಮದ್ ಅಲಿ ಅಕ್ರಂ ಷಾ, ತಹಶೀಲ್ದಾರ್ ಶೃತಿ ಎಂ.ಎಂ., ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್‌. ತಳಕೇರಿ ಇತರರು ಇದ್ದರು.

ಬಳಿಕ ಪ್ರಧಾನಿ ಅವರ ಶ್ರೀನಗರದ ಸಾರ್ವಜನಿಕ ಸಭೆಯ ಹಾಗೂ ಭಾಷಣದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.