ADVERTISEMENT

ಸುಗ್ರೀವಾಜ್ಞೆಗಳನ್ನು ಹಿಂಪಡೆಯದಿದ್ದರೆ ಬೀದಿಗಳಿದು ಹೋರಾಟ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 9:42 IST
Last Updated 28 ಜುಲೈ 2020, 9:42 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು:ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಹಿಂದಕ್ಕೆ ಪಡೆಯದೇ ಇದ್ದರೆ, ಬೀದಿಗಳಿದು ಹೋರಾಟ ಮಾಡುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರೈತರು, ಕಾರ್ಮಿಕರನ್ನು ಬೀದಿ ಪಾಲು ಮಾಡುವ ಮತ್ತು ಉದ್ಯಮಿಗಳಿಗೆ ಮಣೆ ಹಾಕುವ ತಿದ್ದುಪಡಿಯನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಮೂರು ಬಾರಿ ಪತ್ರ ಬರೆದಿದ್ದೇನೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಭೂಸುಧಾರಣೆ ಕಾಯ್ದೆ 1961 ಸೆಕ್ಷನ್‌ 79 ಎ, 79 ಬಿ, 79 ಸಿ ರದ್ದು ಮಾಡಿರುವುದು ರೈತ ವಿರೋಧಿ ಕ್ರಮವಾಗಿದೆ. ಹೊಸ ಕೈಗಾರಿಕ ನೀತಿಯ ಅಗತ್ಯವಿಲ್ಲ. ಕೊರೊನಾ ಇದ್ದ ಕಾರಣ ನಾನು ಮಾತನಾಡಲು ಆಗಿರಲಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದೆ. ಈಗಲೂ ಸುಮ್ಮನೆ ಇದ್ದರೆ ಜನರಿಗೆ ತೊಂದರೆ ಆಗುತ್ತದೆ ಎಂದು ದೇವೇಗೌಡ ಹೇಳಿದರು.

ADVERTISEMENT

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರಿಯಲ್‌ ಎಸ್ಟೇಟ್‌ ಮಾಫಿಯಾಗೆ ಅನುಕೂಲವಾಗುತ್ತದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ಮಾಫಿಯಾ ಹೆಚ್ಚಾಗುತ್ತದೆ. ರೈತರು ಅತಂತ್ರರಾಗಿ ಬೀದಿಗೆ ಬೀಳುತ್ತಾರೆ. ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ. ಯಾರೋ ಒಬ್ಬ ಉದ್ಯಮಿ ಬಂದು ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಖರೀದಿಸುತ್ತಾನೆ. ಏಳು ವರ್ಷಗಳ ಬಳಿಕ ಉದ್ಯಮಿ ಭೂಮಿ ಪರಭಾರೆ ಮಾಡುತ್ತಾನೆ. ಇದರಿಂದ ರೈತನಿಗೆ ಆದ ಪ್ರಯೋಜನವಾದರು ಏನು ಎಂದು ಅವರು ಪ್ರಶ್ನಿಸಿದರು.

ಬಹುಮತ ಇದೆ ಎಂಬ ಒಂದೇ ಕಾರಣಕ್ಕೆ, ಬೇಕಾಬಿಟ್ಟಿ ಕಾಯ್ದೆ ಮಾಡುವುದು ಸರಿಯಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ₹2,000 ಕೋಟಿಯಷ್ಟು ಹಗರಣ ನಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ಇದರ ಬಗ್ಗೆ ಹೋರಾಟ ಮಾಡಬೇಕೋ ಬೇಡವೋ ಗೊತ್ತಾಗುತ್ತಿಲ್ಲ. ಭ್ರಷ್ಟಾಚಾರ ಮಾಡಿದವರೇ ಮತ್ತೇ ಶಕ್ತಿಶಾಲಿ ಆಗುವುದನ್ನು ಇತಿಹಾಸಲದಲ್ಇ ಕಂಡಿದ್ದೇವೆ. ಹಾಗೆಂದು ನಾನು ಸುಮ್ಮನೆ ಕೂರುವುದಿಲ್ಲ ಜನಸಾಮಾನ್ಯರ ವಿಚಾರದಲ್ಲಿ ಆಟವಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಗೌಡರು ಎಚ್ಚರಿಕೆ ನೀಡಿದರು.

ಮಧ್ಯಪ್ರದೇಶದಲ್ಲಿ ಸರ್ಕಾರ ಬೀಳಿಸಿದ್ದು ಯಾರು, ಈಗ ರಾಜಸ್ಥಾನದಲ್ಲಿ ಸರ್ಕಾರ ತೆಗೀತಾ ಇರೋದು ಯಾರು ಎಂಬುದು ಎಲ್ಲರಿಗೂ ಗೊತ್ತು. ಎರಡೂ ರಾಷ್ಟ್ರೀಯ ಪಕ್ಷಗಳು ಜನತೆಯ ತೀರ್ಪು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಕೇವಲ ಅಧಿಕಾರ ಹಿಡಿಯುವುದೇ ಮುಖ್ಯ ಆಗಬಾರದು. ಕುಮಾರಸ್ವಾಮಿ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.