ADVERTISEMENT

ರಾಜಕೀಯದಲ್ಲಿ ಕ್ರಾಂತಿ ಯಾವಾಗ ಬೇಕಾದರೂ ಆಗಬಹುದು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 13:47 IST
Last Updated 12 ಜುಲೈ 2025, 13:47 IST
ತನ್ವೀರ್ ಸೇಠ್
ತನ್ವೀರ್ ಸೇಠ್   

ಮೈಸೂರು: ‘ಇದು ರಾಜಕಾರಣ. ಪಕ್ಷದಲ್ಲಿ ಯಾವಾಗ ಬೇಕಾದರೂ ಕ್ರಾಂತಿ ಆಗಬಹುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್‌ ಸೇಠ್ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಐದು ವರ್ಷ ಸುಭದ್ರ ಸರ್ಕಾರ ಕೊಡಬೇಕಾದುದು ನಮ್ಮ‌ ಜವಾಬ್ದಾರಿ. ಪಕ್ಷದಿಂದ ಸರ್ಕಾರ ಬಂದಿದೆಯೇ ಹೊರತು, ಸರ್ಕಾರದಿಂದ ಪಕ್ಷ ಬಂದಿಲ್ಲ’ ಎಂದರು.

‘ಯಾರಿಗೂ ಅಧಿಕಾರ ಶಾಶ್ವತವಲ್ಲ. ನೂರು ವರ್ಷ ಬದುಕಬೇಕು ಅಂದುಕೊಂಡರೂ ಅದು ಸಾಧ್ಯವೇ ಎಂದು ನೋಡಬೇಕು. ನಾಳೆ ಬೆಳಿಗ್ಗೆ ಏನಾಗುತ್ತದೆಯೋ ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೆಯೋ ಅಲ್ಲಿಯವರೆಗೂ ಅವರೇ ನಮ್ಮ ಮುಖ್ಯಮಂತ್ರಿ’ ಎಂದು ಹೇಳಿದರು.

ADVERTISEMENT

‘ಅಧಿಕಾರ ಹಸ್ತಾಂತರ ಸೂತ್ರ ನಮಗೆ ಗೊತ್ತಿಲ್ಲ. ವರಿಷ್ಟರ ತೀರ್ಮಾನಕ್ಕೆ ನಾವು ಬದ್ಧ. ನಮ್ಮೆಲ್ಲ ಶಾಸಕರ ಬೆಂಬಲ ಪಕ್ಷಕ್ಕಿದೆ. ಯಾರೋ ಮಾತನಾಡಿದಕ್ಕೆ ಪ್ರತಿಕ್ರಿಯಿಸುತ್ತಾ ಹೋದರೆ, ಅದಕ್ಕೆ ಕೊನೆಯೇ ಇರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ. ಜನರ ಆಸೆಗಳಿಗೆ ಸ್ಪಂದಿಸುವ ಸರ್ಕಾರ ಕೊಡಿ ಎಂದು ಬಯಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಸಚಿವ ಸಂಪುಟ ಪುನರ್ ರಚನೆ ಯಾವಾಗ ಬೇಕಾದರೂ ಆಗಬಹುದು. ನನಗೆ ಒಳ್ಳೆಯದಾಗುತ್ತದೆ ಎಂದು ಪಕ್ಷದ ಮೇಲೆ ನಂಬಿಕೆ ಇಟ್ಟುಕೊಂಡು ಕಾಯುತ್ತಿದ್ದೇನೆ. ನಾನು ಸನ್ಯಾಸಿ ಅಲ್ಲ. ಅವಕಾಶ ಸಿಕ್ಕಾಗ ಕೆಲಸ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.