ADVERTISEMENT

ರಾಜ್ಯದಲ್ಲಿ ₹1,120 ಕೋಟಿ ತೆರಿಗೆ ವಂಚನೆ ಪತ್ತೆ

3 ಇಲಾಖೆ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ತೆರಿಗೆ ವಂಚನೆ ಪ್ರಕರಣಗಳು ದಾಖಲು

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 1:06 IST
Last Updated 1 ಜನವರಿ 2025, 1:06 IST
ತೆರಿಗೆ
ತೆರಿಗೆ   

ಬೆಂಗಳೂರು: ವಾಣಿಜ್ಯ ತೆರಿಗೆಗಳ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ತೆರಿಗೆ ವಂಚನೆಗಳ ಪ್ರಕರಣಗಳನ್ನು ಪತ್ತೆ ಮಾಡಿದ್ದು,  ಒಟ್ಟು 15,479 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು ₹1,120.34 ಕೋಟಿಗೂ ಅಧಿಕ ತೆರಿಗೆ ವಂಚಿಸಿರುವುದು ದೃಢಪ‍ಟ್ಟಿದೆ.

ವಾಣಿಜ್ಯ ತೆರಿಗೆ ಇಲಾಖೆಯೊಂದರಲ್ಲೇ ಅತ್ಯಧಿಕ ಪ್ರಕರಣಗಳು (15,465) ಪತ್ತೆಯಾಗಿವೆ. ಇದರಲ್ಲಿ 6,083 ಪ್ರಕರಣಗಳನ್ನು ವಿಚಾರಣೆ ಮತ್ತು ತನಿಖೆಗೆ ಒಳಪಡಿಸಿ ₹1,120.34 ಕೋಟಿಯಷ್ಟು ನಷ್ಟವಾಗಿದೆ ಎಂದು ನಿರ್ಧರಿಸಿ, ದಂಡ ವಸೂಲಿಗೆ ತೀರ್ಮಾನಿಸಲಾಗಿದೆ. ಇನ್ನೂ 9,382 ಪ್ರಕರಣಗಳ ಬಗ್ಗೆ ಇತ್ಯರ್ಥಗೊಳಿಸಿಲ್ಲ.

ಮಹಾಲೇಖಪಾಲರ (ಸಿಎಜಿ) ‘ರಾಜಸ್ವ ಲೆಕ್ಕಪರಿಶೋಧನೆ ಭಾಗ 2’ ರಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2021 ರಿಂದ 2023 ರವರೆಗಿನ ಅವಧಿಯಲ್ಲಿ ಈ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 

ADVERTISEMENT

ಈ ಅವಧಿಯಲ್ಲಿ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳಿಗಿಂತ ವಾಣಿಜ್ಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಬಯಲಿಗೆ ಬಂದಿವೆ. ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ವಾಣಿಜ್ಯ ಇಲಾಖೆ ಇತರ ಎರಡು ಇಲಾಖೆಗಳಿಗಿಂತ ಹೆಚ್ಚು ಮುತುವರ್ಜಿ ವಹಿಸಿದ್ದರೂ ಆ ವರ್ಷದ ಅಂತ್ಯದಲ್ಲಿ ಗಮನಾರ್ಹ ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದವು. ಹೀಗಾಗಿ ಇತ್ಯರ್ಥಗೊಳ್ಳದ  9,382 ಪ್ರಕರಣಗಳ ನಷ್ಟದ ಮೊತ್ತವನ್ನು ನಿರ್ಧರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

ಅಬಕಾರಿ ಇಲಾಖೆಯಲ್ಲಿ ತೆರಿಗೆ ವಂಚನೆಯ ಮೂರು ಪ್ರಕರಣಗಳು ದಾಖಲಾಗಿದ್ದರೂ ಒಂದನ್ನೂ ಇತ್ಯರ್ಥಗೊಳಿಸಿಲ್ಲ. ಹೀಗಾಗಿ ಇದರಿಂದ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತೆರಿಗೆ ವಂಚನೆಯ ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ಪ್ರಕರಣ ಮಾತ್ರ ಇತ್ಯರ್ಥಗೊಳಿಸಿದ್ದು, ನಷ್ಟದ ಮೊತ್ತ
₹5 ಲಕ್ಷ ಎಂದು ಅಂದಾಜಿಸಲಾಗಿದೆ. 10 ಪ್ರಕರಣಗಳ ತೆರಿಗೆ ವಂಚನೆ ಪ್ರಕರಣ ಇತ್ಯರ್ಥಗೊಳಿಸದ ಕಾರಣ ನಷ್ಟದ ಪ್ರಮಾಣ ಅಂದಾಜು ಮಾಡಿಲ್ಲ.

ಮರು ಪಾವತಿಯಲ್ಲಿ ಅಲ್ಪ ಪ್ರಗತಿ:

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮರುಪಾವತಿಗೆ ಕೋರಿಕೆ ಸಲ್ಲಿಸಿ ಒಟ್ಟು 9,254 ಅರ್ಜಿಗಳು ಬಂದಿದ್ದವು, ಅದರಲ್ಲಿ 8,094 ಪ್ರಕರಣಗಳಲ್ಲಿ ಮರುಪಾವತಿ ಮಾಡಿದ್ದು, ₹5,496.91 ಕೋಟಿ ಪಾವತಿಸಲಾಗಿದೆ. ಆದರೂ ವರ್ಷದ ಅಂತ್ಯದಲ್ಲಿ 2,239 ಪ್ರಕರಣಗಳು ಬಾಕಿ ಉಳಿದಿದ್ದು, ₹1,142.88 ಕೋಟಿ ಪಾವತಿ ಮಾಡಬೇಕಾಗಿದೆ. (2020–21 ರ ಸಾಲಿನ ಬಾಕಿ 1,079 ಅರ್ಜಿಗಳು ಸೇರಿ ಒಟ್ಟು 10,303 ಅರ್ಜಿಗಳು ಇದ್ದವು).

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮರುಪಾವತಿಗಾಗಿ 6,863 ಕೋರಿಕೆ ಅರ್ಜಿಗಳು ಬಂದಿದ್ದು, 4,844 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ₹79.99 ಕೋಟಿ ಮರುಪಾವತಿ ಮಾಡಿದ್ದು, ಇನ್ನೂ 5,851 ಕೋರಿಕೆಗಳು ಇತ್ಯರ್ಥ ಆಗಬೇಕಿದ್ದು, ಇದರ ಮೊತ್ತ ₹38.68 ಕೋಟಿ.(2020–21 ರ ಸಾಲಿನ 3,832 ಅರ್ಜಿಗಳು ಸೇರಿ ಒಟ್ಟು10,695 ಅರ್ಜಿಗಳು ಇದ್ದವು). ಆದರೆ, ಅಬಕಾರಿ ಇಲಾಖೆ ಮರುಪಾವತಿ ಕುರಿತು  ಮಾಹಿತಿಯನ್ನು ಒದಗಿಸಿಲ್ಲ ಎಂದು ಸಿಎಜಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.