ADVERTISEMENT

ಎನ್‌ಪಿಎಸ್‌ಗೆ ವಿರೋಧ: ಜನವರಿ 8ರಂದು ಕಪ್ಪುಪಟ್ಟಿ ಧರಿಸಿ ಶಿಕ್ಷಕರ ಪಾಠ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 16:03 IST
Last Updated 5 ಜನವರಿ 2026, 16:03 IST
   

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಮರು ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಜ.8ರಂದು ಕಪ್ಪುಪಟ್ಟಿ ಧರಿಸಿ ಪಾಠ ಮಾಡಲಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸೇವಾನಿರತರಿಗೂ ಕಡ್ಡಾಯಗೊಳಿಸಿರುವ ಸುಪ್ರೀಂ ಕೋರ್ಟ್‌ ಆದೇಶ ಶಿಕ್ಷಕರಿಗೆ ನೋವು ತಂದಿದೆ. ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು. ಟಿಇಟಿ ಕಡ್ಡಾಯ ಮಾಡಬಾರದು. ಗುತ್ತಿಗೆ ಆಧಾರದ ನೇಮಕಾತಿಗಳನ್ನು ಕೈಬಿಟ್ಟು ಕಾಯಂ ನೇಮಕಕ್ಕೆ ಆದ್ಯತೆ ನೀಡಬೇಕು. ದೇಶದ ಎಲ್ಲ ಶಿಕ್ಷಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೇಂದ್ರದ ವೇತನವನ್ನು ರಾಜ್ಯದ ಶಿಕ್ಷಕರಿಗೂ ಅನ್ವಯಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 

ಅಖಿಲ ಭಾರತ ಶಿಕ್ಷಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆಯ ಮೇರೆಗೆ ಅಂದು ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಯ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಶಾಲೆಗೆ ಹಾಜರಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಮಾಹಿತಿ ನೀಡಿದ್ದಾರೆ. 

ADVERTISEMENT