
ಬೆಂಗಳೂರು: ನಾನು ನಗರದ ರಸ್ತೆಗಳ ದುರಸ್ತಿಗೆ ಮುಂದಾಗಿಲ್ಲ, ಮಾಧ್ಯಮಗಳು ಸುಳ್ಳು ಹೇಳಿವೆ ಎಂದು ಉದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು 'ಬೆಂಗಳೂರಿನ ಕೆಲವು ರಸ್ತೆಗಳ ಅಭಿವೃದ್ಧಿಗೆ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ಹಣಕಾಸಿನ ನೆರವನ್ನು ಒದಗಿಸುವ ಸುದ್ದಿ ಕೇಳಿದೆ. ಇದು ಉತ್ತಮ ಬೆಳವಣಿಗೆ. ಅವರಿಗೆ ಧನ್ಯವಾದಗಳು' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
ಆ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಕಿರಣ್ ಮಜುಂದಾರ್ ಷಾ ಅವರು 'ಇದು ಮಾಧ್ಯಮಗಳು ಸೃಷ್ಟಿಸಿರುವ ಸುಳ್ಳು ಸುದ್ದಿ. ನಾನು ರಸ್ತೆ ದುರಸ್ತಿಗೆ ಹಣಕಾಸಿನ ನೆರವು ನೀಡುವ ಕುರಿತು ಎಲ್ಲಿಯೂ ಹೇಳಿಲ್ಲ' ಎಂದಿದ್ದಾರೆ.
'ರಸ್ತೆ ದುರಸ್ತಿ ಕುರಿತ ನನ್ನ ಪ್ರಸ್ತಾಪವನ್ನು ನೀವು ಪರಿಗಣಿಸುತ್ತೀರಾ ಎಂದು ಉಪ ಮುಖ್ಯಮಂತ್ರಿಯವರಿಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯು, ಈ ರೀತಿಯಾಗಿ ಪರಿವರ್ತನೆಗೊಂಡಿದೆ ಎಂದು ಎನಿಸುತ್ತದೆ' ಎಂದು ಹೇಳಿದ್ದಾರೆ.
ಯಾವುದೇ ಫ್ಯಾಕ್ಟ್ ಚೆಕ್ ಮಾಡದೇ ಈ ರೀತಿಯ ಸುದ್ದಿಯನ್ನು ನಿಮ್ಮಂತವರು ಕೂಡ ಹಂಚಿಕೊಂಡಿದ್ದು, ದುಃಖದ ವಿಷಯ ಎಂದು ಚಿದಂಬರಂ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ರಸ್ತೆ ದುರಸ್ತಿಗೆ ನಾನು ಹಣಕಾಸಿನ ನೆರವು ನೀಡುತ್ತೇನೆ ಎಂದು ಹೇಳಿರುವುದಕ್ಕೆ ಸಾಕ್ಷಿ ನೀಡಿ ಎಂದು ಮಾಧ್ಯಮಗಳಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಕೂಡಿವೆ, ಅವುಗಳನ್ನು ತಕ್ಷಣ ದುರಸ್ತಿಗೊಳಿಸಿ ಎಂದು ಕಿರಣ್ ಮಜುಂದಾರ್ ಷಾ ಅವರು 'ಎಕ್ಸ್'ನಲ್ಲಿ ಸರ್ಕಾರಕ್ಕೆ ಒತ್ತಾಯಿಸಿ ಮಾಡಿದ್ದ ಪೋಸ್ಟ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಇದಾದ ನಂತರ, ಕಿರಣ್ ಮಜುಂದಾರ್ ಷಾ ಅವರು ಸ್ವಂತ ಖರ್ಚಿನಲ್ಲಿ ಬೆಂಗಳೂರಿನ 15 ರಸ್ತೆಗಳ ದುರಸ್ತಿಗೆ ಮುಂದಾಗಿದ್ದಾರೆ ಎನ್ನುವ ಸುದ್ದಿಯನ್ನು ಮಾಧ್ಯಮಗಳು ಪ್ರಕಟಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.