ADVERTISEMENT

ಕನ್ನಡಾಂಬೆಯ ಏಕೈಕ ದೇವಾಲಯ: 365 ದಿನವೂ ತ್ರಿಕಾಲದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ

ಸಿದ್ದಾಪುರದ ಭುವನಗಿರಿ

ರಾಮಕೃಷ್ಣ ಸಿದ್ರಪಾಲ
Published 31 ಅಕ್ಟೋಬರ್ 2021, 21:45 IST
Last Updated 31 ಅಕ್ಟೋಬರ್ 2021, 21:45 IST
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಬೆಟ್ಟದ ಮೇಲಿರುವ ಭುವನೇಶ್ವರಿ ದೇವಸ್ಥಾನ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಬೆಟ್ಟದ ಮೇಲಿರುವ ಭುವನೇಶ್ವರಿ ದೇವಸ್ಥಾನ   

ಹುಬ್ಬಳ್ಳಿ: ನಮ್ಮ ರಾಜ್ಯದಲ್ಲಿ ಕನ್ನಡದ ಕುಲದೇವಿ ತಾಯಿ ಭುವನೇಶ್ವರಿಗಾಗಿ ದೇವಾಲಯವೊಂದಿದ್ದು ಅಲ್ಲಿ ವರ್ಷದ 365 ದಿನವೂ ತ್ರಿಕಾಲದಲ್ಲಿ ಪೂಜೆ ನಡೆಯುತ್ತಿರುವುದು ಗೊತ್ತೇ? ಆ ತಾಯಿಯ ದರ್ಶನ ಪಡೆಯಬೇಕಿದ್ದರೆ ನೀವು ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಬೆಟ್ಟ ಹತ್ತ ಬೇಕು. ಅಲ್ಲಿದೆ 16ನೇ ಶತಮಾನದಲ್ಲಿ ಕಟ್ಟಿದ ಕನ್ನಡಮ್ಮನ ದೇವಾಲಯ...

ಸುತ್ತಲೂ ಕಂಗೊಳಿಸುವ ಹಚ್ಚ ಹಸುರಿನ ಬೆಟ್ಟಗುಡ್ಡಗಳು, ತೆಂಗು ಕಂಗು, ಹೂಗಿಡಗಳು, ಪಕ್ಷಿಗಳ ಇಂಚರದ ನಡುವೆ ಪ್ರಶಾಂತವಾಗಿ ನೆಲೆ ನಿಂತಿದ್ದಾಳೆ ದೇವಿ ಭುವನೇಶ್ವರಿ.

ದೇವಸ್ಥಾನದ ಎದುರಿನಲ್ಲಿ ಏಕಶಿಲೆಯಲ್ಲಿ ನಿರ್ಮಿಸಿದ ಧ್ವಜಸ್ತಂಭ, ಅಭಯಹಸ್ತ ನೀಡುವ ಭುವನೇಶ್ವರಿಯ ಮೂರ್ತಿಯೊಂದಿಗಿರುವ ಪ್ರವೇಶದ್ವಾರವಿದೆ. ಚಂದ್ರಶಾಲೆ, ಹೊರ ಆವರಣವನ್ನು ಕಾಲಾನುಕ್ರಮದಲ್ಲಿ ನವೀಕರಿಸುತ್ತ ಬರಲಾಗಿದೆ. ದೇವಸ್ಥಾನ ಪ್ರವೇಶಿಸುತ್ತಿರುವಂತೆ ಕನ್ನಡ ಧ್ವಜದ ಬಣ್ಣದ ಪತಾಕೆಗಳಿಂದ ಅಲಂಕರಿಸಿದ್ದು ಮನ ಸೆಳೆಯುತ್ತದೆ. ಪ್ರತಿ ವರ್ಷ ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸಲಾಗುತ್ತದೆ.

ADVERTISEMENT

ಮೂಲ ದೇವಾಲಯ ವಿಜಯನಗರ ಶೈಲಿಯಲ್ಲಿದ್ದು ಸಂಪೂರ್ಣ ಶಿಲಾಮಯವಾಗಿದೆ. ವಾಸ್ತುಶಿಲ್ಪ ಮನ ಸೆಳೆಯುತ್ತದೆ. ಬಿಳಗಿ ಸಂಸ್ಥಾನವು ವಿಜಯನಗರದ ಅರಸರ ಕಾಲದಲ್ಲಿ 1475ರಿಂದ 1692ರವರೆಗೆ ಅಸ್ತಿತ್ವದಲ್ಲಿತ್ತು. ಈ ಅವಧಿಯಲ್ಲೇ, ಸಾಮಂತರಾಜ ಬಿಳಗಿ ಕೊನೆಯ ಅರಸ ಬಸವೇಂದ್ರನು 1962 ರಲ್ಲಿ ಶಿಲಾಮಯ ದೇವಾಲಯ ಕಟ್ಟಿಸಿದ್ದಾನೆ ಎಂದು ಇತಿಹಾಸ ಹೇಳುತ್ತದೆ. ವಿಜಯನಗರದಲ್ಲಿ ಭುವನೇಶ್ವರಿಯ ಮೂರ್ತಿ ಪ್ರತಿಷ್ಠಾಪಿಸಿದ್ದರೂ ಅಲ್ಲಿ ಪ್ರತ್ಯೇಕ ದೇವಾಲಯವಿಲ್ಲ.

ವರ್ಷವಿಡೀ ಇಲ್ಲಿ ತ್ರಿಕಾಲದಲ್ಲಿ ದೇವಿಗೆ ಪೂಜೆ ನಡೆಯುತ್ತದೆ. 150 ಮೆಟ್ಟಿಲು ಕೆಳಗಿರುವ ಬೆಟ್ಟದ ಬುಡದ ಪುಷ್ಕರ್ಣಿಯ ನೀರನ್ನು ಪ್ರತಿದಿನ ಪೂಜೆಗೆ ಬಳಸಲಾಗುತ್ತದೆ. ಕಾರ್ತೀಕ ಶುದ್ಧ ಹುಣ್ಣಿಮೆಯಂದು ಇಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ನಡೆಯುತ್ತದೆ. ಈ ದೇವಸ್ಥಾನಕ್ಕೆ ಪ್ರಧಾನ ಅರ್ಚಕರಾಗಿರುವವರು ಮುತ್ತಿಗೆ ಮನೆತನದವರು.

ಈ ದೇವಾಲಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿಲ್ಲ. ಸುತ್ತಲ ಗ್ರಾಮಸ್ಥರ ಆಡಳಿತ ಸಮಿತಿ ಇದೆ. ವಾರ್ಷಿಕವಾಗಿ ತಸ್ತೀಕು ಪಡೆಯಲಾಗುತ್ತದೆ. ಸಮೀಪದ ಗುಂಜಗೋಡ, ಬೇಡ್ಕಣಿ, ಹಲಗೇರಿ, ಮುತ್ತಿಗೆ ಮತ್ತಿತರ ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಅವರೆಲ್ಲ ತಮ್ಮ ಕುಲದೇವರೆಂದು ತಾಯಿ ಭುವನೇಶ್ವರಿಯನ್ನು ಪೂಜಿಸುವರು.

ವರ್ಷವಿಡೀ ಪೂಜೆಗೊಳ್ಳುವ ಕನ್ನಡದ ಹೆಮ್ಮೆಯ ದೇವಾಲಯಕ್ಕೆ ಸರ್ಕಾರದಿಂದ ಇನ್ನಷ್ಟು ನೆರವು ಸಿಗಬೇಕು. ಆಗ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ್‌ ಹೆಗಡೆ.

ಪ್ರತಿ ವರ್ಷ ಜಾತ್ರೆ, ರಥೋತ್ಸವ, ಶರನ್ನವರಾತ್ರಿ, ಪಲ್ಲಕ್ಕಿ ಉತ್ಸವಗಳು ವಿಜೃಂಭಣೆಯಿಂದ ಇಲ್ಲಿ ನಡೆಯುತ್ತವೆ. ವಿಜಯದಶಮಿಯಂದು ದೇವಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿ, ದೇವಳದ ಗದ್ದುಗೆಯಲ್ಲಿ ಕುಳ್ಳಿರಿಸಿ ವಿವಿಧ ಆರತಿ ಬೆಳಗಿ ಪೂಜಿಸಲಾಗುತ್ತದೆ. ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಇಡೀ ಭುವನಗಿರಿಯಲ್ಲಿ ಅನುಗಾಲವೂ ಶಂಖ, ಜಾಗಟೆಯ ಸದ್ದು ಅನುರಣಿಸುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.