ಬಳ್ಳಾರಿ: ರಾಜ್ಯದ 43 ಇಲಾಖೆಗಳಲ್ಲಿ ಒಟ್ಟಾರೆ 2.76 ಲಕ್ಷ (2,76,386) ಹುದ್ದೆಗಳು ಖಾಲಿ ಉಳಿದಿರುವುದಾಗಿ ಸರ್ಕಾರದ ಅಧಿಕೃತ ಮಾಹಿತಿಯಿಂದ ಗೊತ್ತಾಗಿದೆ.
‘ಇದರಲ್ಲಿ ‘ಎ’ ದರ್ಜೆಯ 16,017 ಹುದ್ದೆಗಳು ಖಾಲಿ ಇದ್ದರೆ, ‘ಬಿ‘ ದರ್ಜೆಯ 16,734, ‘ಸಿ’ ದರ್ಜೆಯ 1,66,021, ‘ಡಿ’ ದರ್ಜೆಯ 77,614 ಹುದ್ದೆಗಳು ಖಾಲಿಯಾಗಿವೆ’ ಎಂದು ಸರ್ಕಾರ ತಿಳಿಸಿದೆ.
‘ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯೊಂದರಲ್ಲೇ 70,727 ಹುದ್ದೆಗಳು ಖಾಲಿ ಉಳಿದಿವೆ. ನಂತರದ ಸ್ಥಾನದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಇದೆ. ಇಲ್ಲಿ 37,069 ಹುದ್ದೆಗಳು ಭರ್ತಿಯಾಗಬೇಕಿವೆ. ಆ ಬಳಿಕ, ಒಳಾಡಳಿತ ಇಲಾಖೆಯಲ್ಲಿ 26,168 ಹುದ್ದೆಗಳು, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898 ಹುದ್ದೆಗಳು ಭರ್ತಿಯಾಗಲು ಕಾಯುತ್ತಿವೆ’ ಎಂಬುದು ವಿಧಾನಸಭೆಯಲ್ಲಿ ಸರ್ಕಾರ ನೀಡಿರುವ ಲಿಖಿತ ಉತ್ತರದಿಂದ ಗೊತ್ತಾಗಿದೆ. ಮುಖ್ಯಮಂತ್ರಿಯವರೇ ಈ ಮಾಹಿತಿ ನೀಡಿದ್ದಾರೆ.
ಹುದ್ದೆಗಳು ಖಾಲಿ ಇರುವುದರಿಂದ ಆಡಳಿತದ ಮೇಲೆ ಉಂಟಾಗಿರುವ ಒತ್ತಡ, ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸರ್ಕಾರ ಸಮಜಾಯಿಷಿ ನೀಡಿದೆ. ‘ರಾಜ್ಯದಲ್ಲಿ ಆರ್ಥಿಕ ಮಿತವ್ಯಯ ಜಾರಿಯಲ್ಲಿದೆ. ಆದರೂ, ಖಾಲಿ ಹುದ್ದೆಗಳ ಭರ್ತಿಗೆ ಇಲಾಖೆಗಳಿಂದ ಆರ್ಥಿಕ ಇಲಾಖೆಗೆ ಪ್ರಸ್ತಾವಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ, ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಭರ್ತಿಗೆ ಸಮ್ಮತಿ ನೀಡಲಾಗುತ್ತಿದೆ. ಮಂಜೂರಾಗಿ ಖಾಲಿಯಿರುವ ಹುದ್ದೆಗಳಿಗೆ ಪ್ರತಿಯಾಗಿ, ಅರ್ಹ ಸಿಬ್ಬಂದಿ, ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ, ಭತ್ಯೆ ನೀಡಲಾಗುತ್ತಿದೆ’ ಎಂದು ಸರ್ಕಾರ ಹೇಳಿದೆ.
ಗ್ರೂಪ್-ಸಿ ವೃಂದದ 96,844 ಹುದ್ದೆಗಳನ್ನು (ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ ಸಮನಾಂತರ) ಮತ್ತು ತಾಂತ್ರಿಕ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿರುವುದಾಗಿಯೂ ತಿಳಿಸಿದೆ.
ಲಕ್ಷಾಂತರ ಪದವೀಧರರು: ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಹುದ್ದೆಗಳು ಬಾಕಿ ಉಳಿದುಕೊಂಡಿರುವ ನಡುವೆಯೇ, 2022–24ರ ನಡುವಿನ ಎರಡು ವರ್ಷಗಳಲ್ಲಿ ರಾಜ್ಯದ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಒಟ್ಟಾರೆ 8,87,395 ಮಂದಿ ಪದವಿ (ಪದವಿ, ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ) ಪಡೆದು ಹೊರಬಂದಿದ್ದಾರೆ. ಕೌಶಲಾಭಿವೃದ್ಧಿ ಸಚಿವರು ವಿಧಾನ ಪರಿಷತ್‌ನಲ್ಲಿ ನೀಡಿರುವ ಉತ್ತರದಿಂದ ಈ ಅಂಕಿ ಸಂಖ್ಯೆಗಳು ಸಿಕ್ಕಿವೆ.
ಯುವ ನಿಧಿ– ಗ್ಯಾರಂಟಿ ಕಾರ್ಯಕ್ರಮದ ಮೂಲಕ 1,45,978 ಮಂದಿ ಪದವೀಧರರಿಗೆ ಮತ್ತು 2,253 ಡಿಪ್ಲೊಮಾ ಪಾಸಾದವರಿಗೆ ಮಾಸಿಕ ಯುವನಿಧಿ ಯೋಜನೆ ಮೂಲಕ ಹಣ (ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ₹3,000 ಹಾಗೂ ಡಿಪ್ಲೊಮಾ ಪಾಸ್ ನಿರುದ್ಯೋಗಿಗಳಿಗೆ ₹1,500) ನೀಡುತ್ತಿದೆ. ಯುವ ನಿಧಿ ಕಾರ್ಯಕ್ರಮ ಜಾರಿಯಾದ ಬಳಿಕ ಈ ಯೋಜನೆಗೆ ₹172.78 ಕೋಟಿ ವ್ಯಯಿಸಿರುವುದಾಗಿ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ವಿವಿಧ ಇಲಾಖೆಗಳ ವಿವಿಧ ವೃಂದಗಳ ಒಟ್ಟಾರೆ 4673 ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಪ್ರಸ್ತಾವ ಹೋಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ತಿಳಿಸಿದ್ದಾರೆ. ಈ ಕುರಿತು ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಈ ಹುದ್ದೆಗಳ ಪೈಕಿ ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಕ್ಕೆ ಪ್ರಸ್ತಾವ ಸಲ್ಲಿಸಿದ ಬಳಿಕ ಒಂದು ವರ್ಷ ಕಾಲಮಿತಿ ಇರುತ್ತದೆ ಎಂದೂ ಇತರ ವೃಂದದ ಹುದ್ದೆಗಳಿಗೆ ಸಂಬಂಧಿಸಿದ ಇಲಾಖೆಗಳು ಕಾಲಮಿತಿ ವಿಧಿಸಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.