ADVERTISEMENT

ಬಸ್‌ ಪ್ರಯಾಣ ದರ ಹೆಚ್ಚಳ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 9:56 IST
Last Updated 18 ಫೆಬ್ರುವರಿ 2021, 9:56 IST
ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ    

ಕಲಬುರ್ಗಿ: ‘ತೈಲ ದರಗಳು ಹೆಚ್ಚಾಗಿದ್ದರೂ ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

‘ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವಂತೆ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾವ ಬಂದಿದೆ. ಆದರೆ, ಕೊರೊನಾ ಹಾವಳಿ‌ ಹಾಗೂ ನೈಸರ್ಗಿಕ ವಿಕೋಪಗಳಿಂದಾಗಿ ಸಾಮಾನ್ಯ ಜನರು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥದರಲ್ಲಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಮಾಡಿದರೆ ಅವರಿಗೆ ಮತ್ತಷ್ಟು ತೊಂದರೆ ಕೊಟ್ಟಂತಾಗುತ್ತದೆ’ ಎಂದು ಅವರು ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ತಿಳಿಸಿದರು.

‘ಕಳೆದ ಬಾರಿಯ ಬಜೆಟ್‌ನಲ್ಲಿ ಸಾರಿಗೆ ಸಂಸ್ಥೆಯ ನಾಲ್ಕೂ ಘಟಕಗಳಿಗೆ ತಲಾ ಒಂದು ಸಾವಿರ ಹೊಸ ಬಸ್‌ ನೀಡುವುದಾಗಿ ಘೋಷಿಸಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರಿಂದ ಅದು ಈಡೇರಲಿಲ್ಲ. ಈಗಾಗಲೇ ಶೇ 90ರಷ್ಟು ಬಸ್‌ಗಳ ಓಡಾಟ ಆರಂಭವಾಗಿದೆ. ಏಪ್ರಿಲ್‌ ತಿಂಗಳ ಅಂತ್ಯಕ್ಕೆ ಮತ್ತೆ ಮೊದಲಿನ ಸ್ಥಿತಿಗೆ ಬರಬಹುದು. ಹಾಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಈಶಾನ್ಯ, ವಾಯವ್ಯ ರಸ್ತೆ ಸಾರಿಗೆ ಸಾರಿಗೆ ಸಂಸ್ಥೆಗಳು ಹಾಗೂ ಕೆಎಸ್‌ಆರ್‌ಟಿಸಿಗೆ ತಲಾ ಒಂದು ಸಾವಿರ ಬಸ್‌ ನೀಡಲಾಗುವುದು’ ಎಂದರು.

ADVERTISEMENT

‘ಹಳೆಯ ಬಸ್‌ಗಳನ್ನು ಗುಜರಿಗೆ ಹಾಕುವ ಬದಲು ಸ್ವಲ್ಪ ಸುಧಾರಣೆ ಮಾಡಿ, ಸಾಮಾಜಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಉಪಾಯ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಈ ಬಸ್‌ಗಳನ್ನೇ ಶೌಚಾಲಯ, ಡೇ ಕೇರ್‌ ಸೆಂಟರ್‌, ಹಾಲುಣಿಸುವ ಮಹಿಳೆಯರ ಕೇಂದ್ರಗಳಾಗಿ ಪರಿವರ್ತಿಸಲಾಗುವುದು’ ಎಂದೂ ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.