ADVERTISEMENT

ಹಾಸನದಲ್ಲಿ ಅಭ್ಯರ್ಥಿ ಆಯ್ಕೆ ಅನಿವಾರ್ಯತೆ ಇಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 21:39 IST
Last Updated 25 ಜನವರಿ 2023, 21:39 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ರಾಯಚೂರು: ‘ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಜೆಡಿಎಸ್‌ ಸಮರ್ಥ ಅಭ್ಯರ್ಥಿ ಇದ್ದಾರೆ. ಅಲ್ಲಿ ಅಭ್ಯರ್ಥಿ ಆಯ್ಕೆ ಅನಿವಾರ್ಯತೆ ಇದ್ದರೆ, ಭವಾನಿ ರೇವಣ್ಣ ಅವರಿಗೆ ಸ್ಪರ್ಧಿಸುವಂತೆ ನಾನೇ ಹೇಳುತ್ತಿದ್ದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯ ದೇವದುರ್ಗದಲ್ಲಿ ಬುಧವಾರ ಪಂಚರತ್ನ ಯಾತ್ರೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಗೊಂದಲ ಬೇಡ. ಕುಟುಂಬದಲ್ಲಿ ಸಂಘರ್ಷ, ತಳಮಳ ಎಂಬುದು ಇಲ್ಲ. ಎಲ್ಲವನ್ನೂ ಬಗೆಹರಿಸುವೆ. ಪಕ್ಷ ಕಟ್ಟುತ್ತಿರುವ ಲಕ್ಷಾಂತರ ಕಾರ್ಯಕರ್ತರಿಗೆ ತಲೆ ಕೊಡಬೇಕಿರುವುದು ನನ್ನ ಜವಾಬ್ದಾರಿ. ಅವರೇ ನನ್ನ ಕುಟುಂಬ’ ಎಂದರು.

‘2008ರಲ್ಲಿ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗುವಂತೆ ಹೇಳಲು ಅನಿವಾರ್ಯತೆ ಇತ್ತು. ಜೆಡಿಎಸ್‌ ಅಭ್ಯರ್ಥಿ ಎಂದು ಗುರುತಿಸಿದ್ದ ವೀರಭದ್ರಯ್ಯ ಸರ್ಕಾರಿ ನೌಕರರಾಗಿದ್ದರು. ಅವರ ಸ್ವಯಂನಿವೃತ್ತಿಯನ್ನು ಸರ್ಕಾರವು ಅನುಮೋದಿಸಿರಲಿಲ್ಲ. ಹೀಗಾಗಿ ಅನಿತಾ ಸ್ಪರ್ಧಿಸಿ, ಶಾಸಕರಾದರು’ ಎಂದರು.

ADVERTISEMENT

‘ಕ್ಷೇತ್ರದಲ್ಲಿ ಅಭ್ಯರ್ಥಿಗಳು ಇರದಿದ್ದಾಗ ಮತ್ತು ಕಾರ್ಯಕರ್ತರು ನೊಂದುಕೊಂಡಾಗ, ನಮ್ಮ ಕುಟುಂಬ ತಲೆ ಕೊಟ್ಟಿದೆ. ನಾನು ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸ್ಪರ್ಧಿಸಬೇಕಾಯಿತು. ಆದರೆ, ಹಾಸನದಲ್ಲಿ ಅಂತಹ ಪರಿಸ್ಥಿತಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.