ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಅಖಿಲ ಹವ್ಯಕ ಮಹಾಸಭಾ ಆಯೋಜಿಸಿದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಮೂರನೇ ದಿನದ ಸಹಸ್ರಚಂದ್ರ ಸಭೆಯಲ್ಲಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಮಾತನಾಡಿದರು.
-ಪ್ರಜಾವಾಣಿ ಚಿತ್ರ
ಬೆಂಗಳೂರು: ಹವ್ಯಕ ಕನ್ನಡವನ್ನು ಸಂರಕ್ಷಿಸಲು ‘ಹವ್ಯಕ ಅಧ್ಯಯನ ಪೀಠ’ವನ್ನು ಸರ್ಕಾರ ಸ್ಥಾಪಿಸಬೇಕು ಎಂಬುದು ಸೇರಿದಂತೆ ಎಂಟು ನಿರ್ಣಯಗಳನ್ನು ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಅಖಿಲ ಹವ್ಯಕ ಮಹಾಸಭಾವು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಸಮ್ಮೇಳನವು ಭಾನುವಾರ ಸಂಪನ್ನವಾಯಿತು.
ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಅದಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಅಪರ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ‘ತರ್ಪಣ ಭವನ’ವನ್ನು ನಿರ್ಮಿಸಬೇಕು. ಅಡಿಕೆ ಹಾಗೂ ಇತರ ಕೃಷಿಗಳಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಸರ್ಕಾರವನ್ನು ಆಗ್ರಹಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ‘ತಾಯ್ತನಕ್ಕಿಂತ ದೊಡ್ಡ ಪದವಿ ಸಮಾಜದಲ್ಲಿ ಯಾವುದೂ ಇಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಪಡೆಯಿರಿ’ ಎಂದರು.
ಅಡಿಕೆ ಬಗ್ಗೆ ಸಂಶೋಧನೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಅಡಿಕೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅಡಿಕೆಯ ವಾಸ್ತವದ ಬಗ್ಗೆ ತಿಳಿಸಲು ಕೇಂದ್ರ ಸರ್ಕಾರವು ಸಂಶೋಧನೆಗೆ ₹ 10 ಕೋಟಿ ಹಣ ನೀಡಿದೆ. ಅಪಪ್ರಚಾರ ಹತ್ತಿಕ್ಕಲು ಕೇಂದ್ರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ’ ಎಂದ ಅವರು, ‘ಹವ್ಯಕ ಭಾಷೆ ಅಭಿವೃದ್ಧಿಗೆ ಪ್ರತ್ಯೇಕ ಅಕಾಡೆಮಿ, ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಅಂತಹ ಎಲ್ಲ ಪ್ರಯತ್ನಗಳಿಗೆ ನನ್ನ ಬೆಂಬಲ ಇದೆ’ ಎಂದು ಭರವಸೆ ನೀಡಿದರು.
ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಶೃಂಗೇರಿಯ ಅಭಿನವ ಶಂಕರ ಭಾರತೀ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಮ್ಮೇಳನದ ಗೌರವಾಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ, ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು.
ತಾಯ್ತನಕ್ಕಿಂತ ದೊಡ್ಡ ಪದವಿ ಸಮಾಜದಲ್ಲಿ ಯಾವುದೂ ಇಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಪಡೆಯಿರಿ.-ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.