ADVERTISEMENT

ಅರಣ್ಯ ಜಮೀನು ಅಡ ಇಟ್ಟು ಸಾಲ ಪಡೆದ ಥಾಮ್ಸನ್ ರಬ್ಬರ್ ಕಂಪನಿ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 15:26 IST
Last Updated 9 ಜನವರಿ 2024, 15:26 IST
<div class="paragraphs"><p>ಸಚಿವ ಈಶ್ವರ ಬಿ. ಖಂಡ್ರೆ</p></div>

ಸಚಿವ ಈಶ್ವರ ಬಿ. ಖಂಡ್ರೆ

   

ಬೆಂಗಳೂರು: ‘ಅರಣ್ಯ ಜಮೀನು ಭೋಗ್ಯಕ್ಕೆ ಪಡೆದಿದ್ದ ಥಾಮ್ಸನ್ ರಬ್ಬರ್ ಇಂಡಿಯಾ ಲಿಮಿಟೆಡ್‌, ಅದನ್ನೇ ತನ್ನ ಸಾಗುವಳಿ ಜಮೀನು ಎಂದು ಬ್ಯಾಂಕಿನಲ್ಲಿ ಅಡಮಾನ ಇಟ್ಟು ಸಾಲ ಪಡೆದಿದೆ. ಸಾಲ ಕಟ್ಟದ ಕಾರಣ ಬ್ಯಾಂಕಿನವರು ಆ ಭೂಮಿಯನ್ನು ಹರಾಜು ಹಾಕಿದ್ದಾರೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

‘ಕೊಡಗು, ಚಾಮರಾಜನಗರ ಮತ್ತಿತರ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯನ್ನು ಸ್ವಾತಂತ್ರ್ಯಪೂರ್ವದಿಂದಲೂ ಭೋಗ್ಯಕ್ಕೆ ಪಡೆದು ಕಾಫಿ, ಟೀ, ರಬ್ಬರ್ ಬೆಳೆಯುತ್ತಿರುವ ಕಂಪನಿಗಳಿಂದ ಬಾಕಿ ಬರಬೇಕಿದ್ದ ಹಣ ಮತ್ತು ಬಡ್ಡಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ. ಹೀಗೆ ಅರಣ್ಯ ಜಮೀನು ಪಡೆದ ಕಂಪನಿಗಳಿಂದ ಸುಮಾರು ₹ 2 ಸಾವಿರ ಕೋಟಿಯಷ್ಟು ಭೋಗ್ಯದ ಮೊತ್ತ ಮತ್ತು ಬಡ್ಡಿ ಬಾಕಿ ಬರಬೇಕಿದೆ’ ಎಂದರು.

ADVERTISEMENT

‘ಭೋಗ್ಯದ ಅವಧಿ ಮುಗಿದ ಅರಣ್ಯ ಜಮೀನು ಹಿಂಪಡೆಯಲು ಮತ್ತು ಕಂಪನಿಗಳಿಂದ ಬರಬೇಕಾದ ಬಾಕಿ ವಸೂಲಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದರು.

ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, ‘ಬಾಕಿ ವಸೂಲಿಗೆ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕಾನೂನು ಹೋರಾಟ ನಡೆಸಲು ವಿಶೇಷ ಕಾನೂನು ಕೋಶ ರಚಿಸಲಾಗುವುದು’ ಎಂದರು.

‘5,500 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಬ್ರಿಟಿಷರ ಆಡಳಿತ ಕಾಲದಲ್ಲಿ ವಿವಿಧ ಕಂಪನಿಗಳಿಗೆ  ಮತ್ತು ವ್ಯಕ್ತಿಗಳಿಗೆ 99 ವರ್ಷ ದೀರ್ಘಾವಧಿಗೆ ಎಕರೆಗೆ ₹ 2ರಿಂದ ₹ 7ರಂತೆ ಭೋಗ್ಯಕ್ಕೆ ನೀಡಲಾಗಿತ್ತು. ಕೆಲವು ಕಂಪನಿಗಳ ಭೋಗ್ಯದ ಒಪ್ಪಂದವನ್ನು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮೊದಲು ನವೀಕರಿಸಲಾಗಿದೆ. 1997ರಲ್ಲಿ ಭೋಗ್ಯದ ದರವನ್ನು ಪ್ರತಿ ಹೆಕ್ಟೇರ್‌ಗೆ ₹ 5 ಸಾವಿರದಂತೆ ಹೆಚ್ಚಿಸಲಾಗಿದೆ. ಇದನ್ನು ಪ್ರಶ್ನಿಸಿ ಮತ್ತು ಬಡ್ಡಿ ಹಣ ನೀಡುವ ವಿಚಾರದಲ್ಲಿ ಕೆಲವು ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿವೆ’ ಎಂದು ಅವರು ವಿವರಿಸಿದರು.

‘ಈ ಎಲ್ಲ ಕಂಪನಿಗಳು ಪಾವತಿಸಬೇಕಿರುವ ಹಣ, ಬಡ್ಡಿ, ಚಕ್ರಬಡ್ಡಿ, ದಂಡ ಮೊತ್ತ ಸೇರಿದರೆ ₹ 2,000 ಕೋಟಿಗೂ ಹೆಚ್ಚು ಅರಣ್ಯ ಇಲಾಖೆಗೆ ಬರಬೇಕಿದೆ. ಕೊಡಗು ಜಿಲ್ಲೆಯೊಂದರಲ್ಲೇ ಇಲಾಖೆಗೆ ಗುತ್ತಿಗೆ ಮೊತ್ತ ₹ 1,601 ಕೋಟಿ ಬರಬೇಕು ಎಂದು ಲೆಕ್ಕ ಪರಿಶೋಧನಾ ವರದಿ ತಿಳಿಸಿದೆ’ ಎಂದೂ ಸಚಿವರು ಅಂಕಿಅಂಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.