ADVERTISEMENT

ಉಡುಪಿ: ಮೂವರು ಕೋವಿಡ್‌-19 ಸೋಂಕಿತರು ಗುಣಮುಖ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 13:43 IST
Last Updated 10 ಏಪ್ರಿಲ್ 2020, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯ ಮೂವರು ಕೋವಿಡ್‌–19 ಸೋಂಕಿತರು ಗುಣಮುಖರಾಗಿದ್ದು ಶೀಘ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಸೋಂಕಿತರ ಜತೆಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಅವರ ವೈದ್ಯಕೀಯ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದಿರುವುದರಿಂದ ದೊಡ್ಡ ಆತಂಕ ದೂರವಾಗಿದೆ ಎಂದರು.

ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ತೀರಾ ಕಡಿಮೆ ಇದೆ. ಆದರೂ, ಹೊರ ಜಿಲ್ಲೆ ಹಾಗೂ ರಾಜ್ಯಗಳ ಜನರಿಂದ ಹರಡುವ ಸಾಧ್ಯತೆಗಳಿರುವುದರಿಂದ ಉಡುಪಿ ಜಿಲ್ಲೆಯ ಎಲ್ಲ ಗಡಿಗಳನ್ನು ಸೀಲ್‌ ಮಾಡಲಾಗಿದೆ.

ADVERTISEMENT

ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬರುವವರನ್ನು ಜಿಲ್ಲೆಯ ಗಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಯಾರೂ ಉಡುಪಿಗೆ ಬರುವ ವ್ಯರ್ಥ ಪ್ರಯತ್ನ ಮಾಡಬೇಡಿ. ಹಾಗೆಯೇ, ಉಡುಪಿ ಜಿಲ್ಲೆಯವರು ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ತೆರಳುವಂತೆಯೂ ಇಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ನಿರಾಳ:ಮೂವರು ಸೋಂಕಿತರು ಗುಣಮುಖರಾಗಿರುವುದರಿಂದ ಸಾರ್ವಜನಿಕರು ಸದ್ಯಕ್ಕೆ ಕೊರೊನಾ ಆತಂಕ ದೂರವಾದಂತಾಗಿದೆ. ವಿದೇಶಗಳಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಬಹುತೇಕರು 14 ದಿನಗಳ ಅವಧಿಯನ್ನು ಪೂರೈಸಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.

ಜತೆಗೆ, ಮುಂಬೈ ಸೇರಿದಂತೆ ಮಹಾನಗರಗಳಿಂದ ಉಡುಪಿಗೆ ಬಂದಿದ್ದವರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಭಟ್ಕಳದ ಮಹಿಳೆಗೆ ಉಡುಪಿಯಲ್ಲಿ ಚಿಕಿತ್ಸೆ:ಭಟ್ಕಳದ ಕೋವಿಡ್‌ ಸೋಂಕಿತ ಗರ್ಭಿಣಿಗೆ ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ತೀವ್ರ ತೆರನಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಭಟ್ಕಳದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿಲ್ಲ. ಮಾನವೀಯತೆ ನೆಲೆಯಲ್ಲಿ ಮಹಿಳೆಗೆ ಉಡುಪಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ಪ್ರಜಾವಾಣಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.