ADVERTISEMENT

ಕೋಣೆಯಲ್ಲಿ ಇದ್ದಿಲಿನಿಂದ ಬೆಂಕಿ ಹಾಕಿ ನಿದ್ರೆ: ಮಲಗಿದ್ದಲ್ಲೇ ಉಸಿರುಗಟ್ಟಿ 3 ಸಾವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 14:41 IST
Last Updated 18 ನವೆಂಬರ್ 2025, 14:41 IST
<div class="paragraphs"><p>ರಿಹಾನ್ ಹಾಗೂ ಮೋಹಿನ್ ನಾಲಬಂದ</p></div>

ರಿಹಾನ್ ಹಾಗೂ ಮೋಹಿನ್ ನಾಲಬಂದ

   

ಬೆಳಗಾವಿ: ಇಲ್ಲಿನ ಅಮನ್‌ ನಗರದಲ್ಲಿ ಸೋಮವಾರ ರಾತ್ರಿ ರೂಮಿನಲ್ಲಿ ಮಲಗಿದ್ದ ಮೂವರು ಯುವಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಪಾಲಕರು ಇವರನ್ನು ಹುಡುಕುತ್ತ ಬಂದಾಗಲೇ ಘಟನೆ ಗೊತ್ತಾಗಿದೆ.

ಅಮನ್‌ ನಗರದ ನಿವಾಸಿಗಳಾದ ರಿಹಾನ್ ಮತ್ತೆ (22), ಮೋಹಿನ್ ನಾಲಬಂದ (23) ಹಾಗೂ ಸರ್ಫರಾಜ್ ಹರಪ್ಪನಹಳ್ಳಿ (22) ಮೃತಪಟ್ಟವರು. ಇವರೊಂದಿಗೇ ಮಲಗಿದ್ದ ಶಾಹನವಾಜ್ (19) ಎಂಬ ಪ್ರಜ್ಞಾಹೀನವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ನಾಲ್ವರೂ ಸೇರಿ ಸೋಮವಾರ ಮಧ್ಯಾಹ್ನ ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ರಾತ್ರಿ ಚಳಿ ಹೆಚ್ಚಾಗಿದ್ದರಿಂದ ಮಲಗುವ ಕೋಣೆಯಲ್ಲಿ ಇದ್ದಿಲಿನ ಒಲೆ (ಶೀಗಡಿ)ಯಲ್ಲಿ ಬೆಂಕಿ ಹಾಕಿ ರೂಮಿನಲ್ಲಿ ಇಟ್ಟುಕೊಂಡಿದ್ದರು. ಅದೇ ಒಲೆಯಲ್ಲಿ ನಾಲ್ಕು ಸೊಳ್ಳೆ ನಿರೋಧಕ ಕಾಯಿಲ್‌ಗಳನ್ನು ಹಾಕಿದ್ದು ಗೊತ್ತಾಗಿದೆ.

ಯುವಕರು ಮಲಗಿದ ರೂಮಿಗೆ ಕಿಟಕಿಗಳಿಲ್ಲ. ಬಾಗಿಲನ್ನು ಭದ್ರವಾಗಿ ಹಾಕಿಕೊಂಡಿದ್ದರು. ನಿದ್ರೆಗೆ ಜಾರಿದ ಮೇಲೆ ಕೋಣೆಯ ಒಳಗೆ ಇದ್ದಿಲಿನ ಹೊಗೆ ದಟ್ಟವಾಗಿ ಆವರಿಸಿ, ಉಸಿರಾಟಕ್ಕೆ ಸಮಸ್ಯೆ ಆಗಿದೆ. ಆಕ್ಸಿಜನ್‌ ಕೊರತೆಯಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ನಾಲ್ವರೂ ಅಕ್ಕಪಕ್ಕದ ಮನೆಯವರೇ ಆಗಿದ್ದು, ನಾಲ್ವರ ಪಾಲಕರೂ ಮಂಗಳವಾರ ಸಂಜೆಯವರೆಗೆ ಯಾರನ್ನೂ ಹುಡುಕಾಡಿಲ್ಲ. ಸಂಜೆಗೆ ಮಲಗುವ ಕೋಣೆಯ ಬಾಗಿಲು ಮುರಿದಾಗ ಘಟನೆ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಸಕ ಆಸಿಫ್‌ ಸೇಠ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತರ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.