ADVERTISEMENT

ಹುಲಿ ಸಮೀಕ್ಷೆ: ಇಂದಿನಿಂದ ಹೆಜ್ಜೆ ಗುರುತು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 0:14 IST
Last Updated 5 ಜನವರಿ 2026, 0:14 IST
ಎಚ್.ಡಿ.ಕೋಟೆಯ ಚಾಕಳ್ಳಿ ಜಮೀನಿನಲ್ಲಿ ಪತ್ತೆಯಾದ ಹುಲಿ ಹೆಜ್ಜೆ ಗುರುತು
ಎಚ್.ಡಿ.ಕೋಟೆಯ ಚಾಕಳ್ಳಿ ಜಮೀನಿನಲ್ಲಿ ಪತ್ತೆಯಾದ ಹುಲಿ ಹೆಜ್ಜೆ ಗುರುತು   

ಬೆಂಗಳೂರು: ಕರ್ನಾಟಕದಲ್ಲಿ ಹುಲಿ ಸಮೀಕ್ಷೆ 2026ರ 2ನೇ ಹಂತದ ಪ್ರಕ್ರಿಯೆ ಸೋಮವಾರ( ಜ.5) ಆರಂಭಗೊಳ್ಳಲಿದ್ದು, ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಅವುಗಳಿಗೆ ಹೊಂದಿಕೊಂಡಿರುವ ವನ್ಯಜೀವಿ ಹಾಗೂ ಪ್ರಾದೇಶಿಕ ವಿಭಾಗಗಳಲ್ಲೂ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ಹೆಜ್ಜೆ ಹಾಕಿ ಮಾಹಿತಿ ಕಲೆ ಹಾಕಲಿದ್ದಾರೆ.

ಈಗಾಗಲೇ ಕ್ಯಾಮರಾಗಳನ್ನು ಬಳಸಿ ಸಮೀಕ್ಷೆ ಕಾರ್ಯ ಕರ್ನಾಟಕದ ಐದು ಹುಲಿ ಯೋಜನೆ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ ಹಾಗೂ ಕಾಳಿ ಜಾರಿಯಲ್ಲಿದೆ. ಎರಡನೇ ಹಂತದಲ್ಲಿ ಮೂರು ದಿನ ಹುಲಿಗಳ ಹೆಜ್ಜೆ ಗುರುತು ಹಾಗೂ ಇರುವಿಕೆ ಆಧರಿಸಿ(ಸೈನ್‌) ಮಾಹಿತಿ ಕಲೆ ಹಾಕಲಾಗುತ್ತದೆ. ಇತರೆ ಮಾಂಸಾಹಾರಿ ಪ್ರಾಣಿಗಳ ಹೆಜ್ಜೆ ಗುರುತು ಸಂಗ್ರಹಿಸಲಾಗುತ್ತದೆ. ಮೂರನೇ ಹಂತವಾಗಿ ಲೈನ್ಸ್ ಟ್ರಾನ್ಸಾಕ್ಟ್‌ ಪದ್ದತಿಯಡಿ ಜ.9ರಿಂದ ನಾಲ್ಕು ದಿನ ಸಮೀಕ್ಷೆ ನಡೆಸಲಾಗುತ್ತದೆ.

ಎನ್‌ಟಿಸಿ‌ಎ ಸಹಯೋಗದಲ್ಲಿ ಭಾರತದ ವನ್ಯಜೀವಿ ಸಂಸ್ಥೆ (ಐಡಬ್ಲ್ಯುಐ) ಅಭಿವೃದ್ಧಿಪಡಿಸಿರುವ ಆಂಡ್ರಾಯ್ಡ್ ಆಧಾರಿತ ಮೊಬೈಲ್‌ ಆ್ಯಪ್‌ ಎಂ ಸ್ಟ್ರೈಪ್‌ನಲ್ಲಿ ಎಲ್ಲಾ ಮಾಹಿತಿ ಕಲೆ ಹಾಕಲಾಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ, ಅರಣ್ಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ಸ್ವಯಂಸೇವಕರಿಗೆ ಅವಕಾಶ ನೀಡಿಲ್ಲ.

ADVERTISEMENT

‘ಪ್ರತಿ ನಾಲ್ಕು ವರ್ಷಕ್ಕೊಮ್ಮೆ ದೇಶದಾದ್ಯಂತ ಏಕಕಾಲಕ್ಕೆ ಹುಲಿ ಅಂದಾಜು ಸಮೀಕ್ಷೆ ಚಟುವಟಿಕೆ ನಡೆಯುತ್ತದೆ. ಆರನೇ ಆವೃತ್ತಿಯ ಸಮೀಕ್ಷೆ ಈಗ ಶುರುವಾಗಿದೆ. ಮುಂದಿನ ಕೆಲವು ದಿನ ಈ ಪ್ರಕ್ರಿಯೆ ಮುಗಿಸಿ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಒದಗಿಸಲಾಗುತ್ತದೆ. ತಜ್ಞರ ತಂಡ ಸಂಪೂರ್ಣ ಮಾಹಿತಿ ವಿಶ್ಲೇಷಿಸಲಿದೆ. ಕೇಂದ್ರ ಸರ್ಕಾರ  ರಾಜ್ಯವಾರು ಹುಲಿಗಳ ಅಂದಾಜನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ’ ಎಂದು ಕರ್ನಾಟಕ ಹುಲಿ ಯೋಜನಾ ನಿರ್ದೇಶಕ ಹಾಗೂ ಗಣತಿ ನೋಡಲ್ ಅಧಿಕಾರಿ ಡಾ.ಪಿ.ರಮೇಶ್‌ ಕುಮಾರ್ ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.