ADVERTISEMENT

ಟಿಪ್ಪು ಜಯಂತಿ: ಕೊಡಗಿನಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ, ಪೊಲೀಸ್‌ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 12:36 IST
Last Updated 9 ನವೆಂಬರ್ 2018, 12:36 IST
   

ಮಡಿಕೇರಿ: ತೀವ್ರ ವಿರೋಧಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿಗೆ ಕೊಡಗಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತದಿಂದ ಶನಿವಾರ ನಗರದ ಹಳೇ ಕೋಟೆಯ ವಿಧಾನ ಸಭಾಂಗಣದಲ್ಲಿ ಜಯಂತಿ ನಡೆಯುತ್ತಿದ್ದು ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.

ಜಿಲ್ಲೆಯ ಒಳಗೆ 40 ಹಾಗೂ ಕೇರಳ ರಾಜ್ಯದ ಕಣ್ಣೂರು, ವಯನಾಡು, ಕಾಸರಗೋಡು, ಹಾಸನ, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗೆ ಹೊಂದಿಕೊಂಡಂತೆ 10 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು, 40 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ತಾಲ್ಲೂಕುಗಳ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ 200 ಸಿ.ಸಿ ಟಿ.ವಿ ಕ್ಯಾಮೆರಾ ಹಾಕಲಾಗಿದೆ.

ಹೆಚ್ಚುವರಿ ಎಸ್‌ಪಿ ಮೇಲುಸ್ತುವಾರಿಯಲ್ಲಿ, 6 ಡಿವೈಎಸ್‌ಪಿ, 20 ಇನ್‌ಸ್ಪೆಕ್ಟರ್‌, 46 ಪಿಎಸ್‌ಐ, 104 ಎಎಸ್‌ಐ, 850 ಕಾನ್‌ಸ್ಟೆಬಲ್‌, 21 ಡಿಎಆರ್‌ ತುಕಡಿ,10 ಕೆಎಸ್‌ಆರ್‌ಪಿ ತುಕಡಿ, 300 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಕ್ಷಿಪ್ರ ಕಾರ್ಯ ಪಡೆಯನ್ನು ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪನ್ನೇಕರ್‌ ತಿಳಿಸಿದರು.

ADVERTISEMENT

2015ರಲ್ಲಿ ನಡೆದಿದ್ದ ಗಲಾಟೆಗೆ ಹೊರ ರಾಜ್ಯದಿಂದ ಬಂದ ಕಿಡಿಗೇಡಿಗಳೇ ಕಾರಣವೆಂಬ ಆರೋಪವಿತ್ತು. ಹೀಗಾಗಿ, ರಾಜ್ಯದ ಗಡಿಭಾಗದಲ್ಲಿ ಹದ್ದಿನ ಕಣ್ಣಿಡಲಾಗಿದೆ.

ಜಿಲ್ಲೆಯ ಒಳಕ್ಕೆ ಬರುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಂಡಿದ್ದು, ಶನಿವಾರ ನಡೆಯಬೇಕಿದ್ದ ಎಲ್ಲ ಸಂತೆಗಳನ್ನೂ ರದ್ದುಪಡಿಸಲಾಗಿದೆ. ಜಿಲ್ಲಾಡಳಿತ ಹೊರತುಪಡಿಸಿ ಸಾರ್ವಜನಿಕರು ಬೇರೆಲ್ಲೂ ಜಯಂತಿ ಆಚರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಟಿಪ್ಪು ಜಯಂತಿ ಆಚರಣೆ ವಿರೋಧಿ ಹೋರಾಟ ಸಮಿತಿ ಕೊಡಗು ಬಂದ್‌ಗೆ ಕರೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಬಸ್‌, ಆಟೊ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಹಾಗೂ ಬಿಜೆಪಿ ಕಾರ್ಯಕರ್ತರು ಓಂಕಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಕಾವೇರಿ ಮಾತೆಯ ಶಾಪ ತಟ್ಟಲಿದೆ’ ಎಂದು ಬೋಪಯ್ಯ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.