ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ: ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಕತ್ತರಿ?

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 20:36 IST
Last Updated 24 ಮಾರ್ಚ್ 2022, 20:36 IST
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್   

ಬೆಂಗಳೂರು: ‘ಟಿಪ್ಪು ಸುಲ್ತಾನ್ ಬಗೆಗಿನ ವೈಭವೀಕರಣ ಕಡಿಮೆ ಮಾಡಬೇಕು, ಈಶಾನ್ಯ ಭಾರತವನ್ನು 600 ವರ್ಷಗಳ ಕಾಲ ಆಳಿದ ಆಹೋಂ ಸಾಮ್ರಾಜ್ಯ ಮತ್ತು ಕಾಶ್ಮೀರ ಕಣಿವೆಯನ್ನು 300 ವರ್ಷಗಳವರೆಗೆ ಆಳಿದ ಕಾರ್ಕೋಟ ವಂಶದ ರಾಜರ ಬಗ್ಗೆ ಪಠ್ಯ ಅಳವಡಿಸಬೇಕು’ ಎಂದು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿ ಪರಿಷ್ಕರಿಸಿದ ಒಂದರಿಂದ 10ನೇ ತರಗತಿವರೆಗಿನ ಕನ್ನಡ ಭಾಷಾ ವಿಷಯದ 15 ಪಠ್ಯಗಳು ಮತ್ತು 6ರಿಂದ 8ನೇ ತರಗತಿಯ ಸಮಾಜ ವಿಜ್ಞಾನದ ಏಳು ಮಾಧ್ಯಮಗಳ 68 ಪಠ್ಯಪುಸ್ತಕಗಳನ್ನು (ಒಟ್ಟು 83 ಪರಿಷ್ಕೃತ ಪಠ್ಯಪುಸ್ತಕಗಳು) 2022–23ನೇ ಶೈಕ್ಷಣಿಕ ಸಾಲಿನಿಂದ ಅಳವಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಪಠ್ಯಪುಸ್ತಕ ಪರಿಷ್ಕರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಈ ಸಮಿತಿಯು ಮಾರ್ಚ್‌ 8ರಂದು ವರದಿ ನೀಡಿದೆ. ಪರಿಷ್ಕರಣೆಗೊಂಡಿರುವ ಪಠ್ಯ ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ಇದೇ 19ರಂದು ಆದೇಶ ಹೊರಡಿಸಲಾಗಿದೆ.

ADVERTISEMENT

‘ಪಠ್ಯ ಪುಸ್ತಕದಲ್ಲಿದ್ದ ಟಿಪ್ಪು ಸುಲ್ತಾನನ ಕುರಿತ ಮಾಹಿತಿಗಳನ್ನು ತೆಗೆದು ಹಾಕಿಲ್ಲ. ಆದರೆ, ಈ ಪಠ್ಯವು ವರ್ಣರಂಜಿತ ಆಗಿರುವುದಿಲ್ಲ’ ಎಂದು ಸಮಿತಿಯ ಮೂಲಗಳು ತಿಳಿಸಿವೆ.

‘ಒಬ್ಬ ರಾಜನಾಗಿ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ ಪಾಠವನ್ನು ಕಲಿಯುವ ಅಗತ್ಯವಿದೆ. ನಾವು ಪಠ್ಯವನ್ನು ಪರಿಷ್ಕರಿಸುವ ಮೂಲಕ ಟಿಪ್ಪು ಕುರಿತ ಮಾಹಿತಿಯಲ್ಲಿದ್ದ ಅಸಮತೋಲನ ಸರಿಪಡಿಸಿದ್ದೇವೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು ಟಿಪ್ಪು ಸುಲ್ತಾನ್‌ ಕುರಿತ ಕೆಲವು ವಿಷಯಗಳನ್ನು ಹೆಚ್ಚು ವೈಭವೀಕರಿಸಿತ್ತು‘ ಎಂದೂ ಮೂಲಗಳು ಹೇಳಿವೆ.

ಕೊಡಗಿನ ಹಲವು ಸ್ಥಳ ನಾಮಗಳನ್ನು ಬದಲಿಸಿದ್ದ ಮತ್ತು ಹಿಂದೂ ದೇವಾಲಯಗಳನ್ನು ಕೆಡವಿದ್ದ ಟಿಪ್ಪು ಸುಲ್ತಾನನ ಕುರಿತ ಪಠ್ಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವಂತೆ ಅಪ್ಪಚ್ಚು ರಂಜನ್‌ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಒತ್ತಾಯಿಸಿದ್ದರು. ಪಠ್ಯಪುಸ್ತಕ ಸಮಿತಿ ಈ ಬಗ್ಗೆ ನಿರ್ಣಯ ತೆಗೆದುಕೊಂಡಾಗ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ, ಮತ್ತೆ ಪಠ್ಯ ಭಾಗವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿತ್ತು.

ಸ್ವಾತಂತ್ರ ಹೋರಾಟದ ಮುಂಗೋಳಿ ಎಂದೇ ಹೆಸರಾದ ಮೈಸೂರು ಹುಲಿ ಟಿಪ್ಪುಸುಲ್ತಾನ್‌ ಬಗೆಗೆ ಬಿಜೆಪಿ ಆಕ್ಷೇಪ ಎತ್ತುತ್ತಲೇ ಬಂದಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ಚಾಲನೆ ನೀಡಿತ್ತು. ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಅದನ್ನು ರದ್ದುಪಡಿಸಿದೆ.

ಯಾವುದು ಪರಿಷ್ಕರಣೆ: 1ರಿಂದ 10ನೇ ತರಗತಿವರೆಗಿನ ಕನ್ನಡ ಭಾಷಾ ವಿಷಯಗಳ ಪಠ್ಯಪುಸ್ತಕಗಳು, 2 ಮತ್ತು 4ನೇ ತಗರತಿಯ ಪರಿಸರ ಅಧ್ಯಯನ ಹಾಗೂ 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳನ್ನು ಸಮಿತಿ ಪರಿಷ್ಕರಿಸಿದ್ದು, ಇದಕ್ಕೆ ಸರ್ಕಾರ ಅನುಮತಿ ನೀಡಿದೆ.

6ರಿಂದ 10ನೇ ತರಗತಿ ಸಮಾಜ ವಿಜ್ಞಾನ ವಿಷಯದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪರಿಷ್ಕೃತ ಪಠ್ಯಗಳು ಮತ್ತು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಇತರ 5 ಮಾಧ್ಯಮಗಳಲ್ಲಿ (ಉರ್ದು, ತಮಿಳು, ತೆಲುಗು, ಮರಾಠಿ, ಹಿಂದಿ) ಅನುವಾದಿಸಿ, ಅನುವಾದ ಕಾರ್ಯ ಮುಗಿದ ಬಳಿಕ 2022–23ನಿಂದಲೇ ವಿತರಿಸಲು ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.