ADVERTISEMENT

2 ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶ ಪತ್ತೆ; ಆರೋಗ್ಯ ಇಲಾಖೆಯಿಂದ ಇಂದು ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:03 IST
Last Updated 6 ಅಕ್ಟೋಬರ್ 2025, 6:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹಾಸನ: ರಾಜ್ಯದಲ್ಲಿ ಎರಡು ಕಾಫ್ ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತಿದೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಸ್ಪಷ್ಟ ಸೂಚನೆ ನೀಡಲಾಗುತ್ತದೆ ಎಂದರು.

ಕಾಫ್ ಸಿರಫ್ ತಯಾರಿಸುವ ಬೇರೆ ಕಂಪನಿಗಳ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಒಂದೆರಡು ದಿನಗಳಲ್ಲಿ ಅದರ ವರದಿ ಬರುತ್ತದೆ. ರಾಜ್ಯದಲ್ಲಿ ಯಾವುದೇ ರೀತಿಯ ಅಸುರಕ್ಷಿತ ಔಷಧ ಮಾರುಕಟ್ಟೆಗೆ ಬಾರದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ADVERTISEMENT

ನಾವು ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ಸಾಕಷ್ಟು ತಪಾಸಣೆ ನಡೆಯುತ್ತಿದೆ. ಕರ್ನಾಟಕ ಇಂದು ದೇಶದ ಮುಂಚೂಣಿಯಲ್ಲಿದೆ. ಔಷಧಗಳ ವ್ಯವಹಾರದಲ್ಲಿ ಪಾರದರ್ಶಕತೆ ತರುವುದು ಅತ್ಯವಶ್ಯಕ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ ಎಂದರು.

ಕಾಫ್ ಸಿರಫ್ ತಯಾರಿಕಾ ಘಟಕಗಳು ಮತ್ತು ಸರಬರಾಜುದಾರರ ನಡುವೆ ಸಂವಹನದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ತಯಾರಕರು ಒಂದೇ ಕಡೆ ಇರುತ್ತಾರೆ, ಸರಬರಾಜು ಬೇರೆ ಕಡೆ ನಡೆಯುತ್ತದೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೂ ಮಾಹಿತಿ ಹಂಚಿಕೊಳ್ಳಬೇಕು ಎಂದರು.

ಪತ್ತೆಯಾದ ಕಾಫ್ ಸಿರಪ್ ಕರ್ನಾಟಕದಲ್ಲಿ ಸರಬರಾಜಾಗಿಲ್ಲ. ಆದರೆ ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ ಹಾಗೂ ಒಡಿಶಾದಲ್ಲಿ ಬಳಕೆಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಸಿರಫ್‌ಗಳಲ್ಲಿ ಡೈ ಎಥಿಲಿನ್ ಕಾಲ್ ಎಂಬ ಹಾನಿಕರ ರಾಸಾಯನಿಕ ಅಂಶ ಬಳಕೆಯಾಗಿದೆ. ಮಕ್ಕಳಿಗೆ ಕಾಫ್ ಸಿರಪ್ ನೀಡುವಾಗ ಪಾಲಕರು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಪ್ ನೀಡುವ ಮೊದಲು ವೈದ್ಯರ ಸಲಹೆ ಅವಶ್ಯ ಎಂದು ಎಚ್ಚರಿಸಿದರು.

ಆರೋಗ್ಯ ಇಲಾಖೆ ರಾಜ್ಯದಾದ್ಯಂತ ಮಾದರಿ ಸಂಗ್ರಹಣೆ ಮತ್ತು ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸಿದ್ದು, ಯಾವುದೇ ಅಸುರಕ್ಷಿತ ಔಷಧ ಪತ್ತೆಯಾದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.