ADVERTISEMENT

ಸಾರಿಗೆ ಇಲಾಖೆ: ಪೊಲೀಸ್‌ ತರಬೇತಿ ಇಲ್ಲದೆಯೂ ಬಡ್ತಿ

ಬಾಲಕೃಷ್ಣ ಪಿ.ಎಚ್‌
Published 21 ಫೆಬ್ರುವರಿ 2025, 0:10 IST
Last Updated 21 ಫೆಬ್ರುವರಿ 2025, 0:10 IST
   

ಬೆಂಗಳೂರು: ಸಂಚಾರ ನಿಯಮದ ತರಬೇತಿ ಇಲ್ಲದಿದ್ದರೂ, ಪ್ರಭಾವ ಬಳಸಿಕೊಂಡ ಕೆಲವು ಅಧಿಕಾರಿಗಳು ಸಾರಿಗೆ ಇಲಾಖೆಯಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. 

ಸಾರಿಗೆ ಇಲಾಖೆಯಲ್ಲಿ ಸಮವಸ್ತ್ರ ಧರಿಸುವ ಹುದ್ದೆಗಳಿಗೆ ನೇಮಕವಾದವರು ಅಥವಾ ಬಡ್ತಿ ಪಡೆದವರು ಶಿಸ್ತು, ಸಂಚಾರ ನಿಯಮ ತಿಳಿದುಕೊಳ್ಳುವುದಕ್ಕಾಗಿ ಮೂರು ತಿಂಗಳ ಪೊಲೀಸ್‌ ತರಬೇತಿ ಪಡೆಯಬೇಕು. ಈ ನಿಯಮ ‘ಪ್ರಭಾವ’ ಹೊಂದಿರುವವರಿಗೆ ಅನ್ವಯವಾಗುತ್ತಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.

ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರಿಗಳೇ ಹೊಡೆದಾಡಿಕೊಂಡಿದ್ದು, ದೂರು ಪ್ರತಿದೂರುಗಳು ದಾಖಲಾಗಿದ್ದವು. ಈ ಪ್ರಕರಣ ಆರೋಪಿಗಳಲ್ಲಿ ಮೋಟಾರು ವಾಹನ ಹಿರಿಯ ನಿರೀಕ್ಷಕ ಮಲ್ಲೇಶಪ್ಪ ಅವರು ಒಬ್ಬರು. ಅವರಿಗೂ ಪೊಲೀಸ್‌ ತರಬೇತಿಯಾಗಿಲ್ಲ ಎಂಬುದು ಈ ಹಲ್ಲೆ ಪ್ರಕರಣದ ಬಳಿಕ ಗೊತ್ತಾಗಿದೆ.

ADVERTISEMENT

ಇದಲ್ಲದೇ ಕಾರವಾರ, ಸಾಗರ, ಬೀದರ್‌, ಹಾಸನ, ಹುಣಸೂರು, ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಿರೀಕ್ಷಕರಾಗಿ, ಹಿರಿಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ರವಿ, ವಾಸುದೇವ, ಮಲಕರಿ ಸಿದ್ಧ ಬಿರಾದಾರ, ಪದ್ಮನಾಭ, ಮಹೇಶ್‌, ಶಿವಸ್ವಾಮಿ ಸಹಿತ ಅನೇಕರು ಪೊಲೀಸ್‌ ತರಬೇತಿಯನ್ನು ಪಡೆದಿಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಣಾಮಕಾರಿ ಕಾನೂನು ಜಾರಿ ಕಾರ್ಯತಂತ್ರಗಳು, ತುರ್ತು ಸಂದರ್ಭಗಳಲ್ಲಿ ಸಮನ್ವಯ ಮತ್ತು ರಸ್ತೆ ಸುರಕ್ಷತಾ ಸಮಸ್ಯೆಗಳನ್ನು ನಿಭಾಯಿಸುವುದನ್ನು ಪೊಲೀಸ್‌ ತರಬೇತಿಯು ಕಲಿಸಿಕೊಡುತ್ತದೆ. ಸಾರಿಗೆ ನೀತಿಗಳು, ನಿಯಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಾರಿಗೆ ವ್ಯವಸ್ಥೆಯ ಉತ್ತಮ ನಿರ್ವಹಣೆಗಾಗಿ ತರಬೇತಿ ಸಹಕಾರಿಯಾಗಿದೆ. ಜೊತೆಗೆ ಶಿಸ್ತು ಪಾಲನೆಯನ್ನು ಕೂಡ ಕಲಿಯುವುದರಿಂದ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳು ಕಿರಿಯರೊಂದಿಗೆ, ಕಿರಿಯ ಅಧಿಕಾರಿಗಳು ಹಿರಿಯರೊಂದಿಗೆ ಹೇಗೆ ನಡೆವಳಿಕೆ ಹೊಂದಿರಬೇಕು ಎಂಬುದು ಗೊತ್ತಾಗುತ್ತದೆ. ಆದರೆ, ಅನೇಕ ನಿರೀಕ್ಷಕರು, ಹಿರಿಯ ನಿರೀಕ್ಷಕರು ಪ್ರಭಾವ ಬಳಸಿ ತರಬೇತಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ‍ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ದೂರಿದರು.

ವರದಿ ತರಿಸುತ್ತೇನೆ: ‘ನಾನು ಸಾರಿಗೆ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯಾರೂ ತರಬೇತಿಯಿಂದ ತಪ್ಪಿಸಿಕೊಂಡಿಲ್ಲ. ಹಿಂದೆ ತಪ್ಪಿಸಿಕೊಂಡವರ ಬಗ್ಗೆ ವರದಿ ತರಿಸಿ ಪರಿಶೀಲನೆ ನಡೆಸಲಾಗುವುದು’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.