ADVERTISEMENT

ಸಾರಿಗೆ ಮುಷ್ಕರ ನಡೆಯಲ್ಲ ಅಂದುಕೊಂಡಿರುವೆ: ಸಚಿವ ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 9:51 IST
Last Updated 18 ಫೆಬ್ರುವರಿ 2026, 9:51 IST
<div class="paragraphs"><p>ರಾಮಲಿಂಗಾ ರೆಡ್ಡಿ</p></div>

ರಾಮಲಿಂಗಾ ರೆಡ್ಡಿ

   

ಬಿಡದಿ (ರಾಮನಗರ): ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕೆಎಸ್‌ಆರ್‌ಟಿಸಿ ಮತ್ತು ಇತರ ಸಾರಿಗೆ ನಿಗಮಗಳ ನೌಕರರ ಯೂನಿಯನ್ ಗುರುವಾರ ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ, ಯೂನಿಯನ್ ಜೊತೆ ಮಾತನಾಡುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರಿಗೆ ಹೇಳಿರುವೆ. ಹಾಗಾಗಿ, ಮುಷ್ಕರ ನಡೆಯಲ್ಲ ಅಂದುಕೊಂಡಿರುವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಈ ಕುರಿತು ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ತಮ್ಮ ಸಮಸ್ಯೆಗಳ ಕುರಿತು ಗಮನ ಸೆಳೆಯಲು ಬೆಂಗಳೂರು ಚಲೋ ಮಾಡುವುದಾಗಿ ಯೂನಿಯನ್‌ನವರು ಹೇಳಿದ್ದಾರೆ. ನಾನೂ ಸಹ ಮಾತುಕತೆ ನಡೆಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಬಸ್‌ನಲ್ಲಿ ಲಗೇಜ್ ದರ ಏರಿಕೆ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ರೆಡ್ಡಿ, ‘ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. 2021ರಲ್ಲಿ ಅವರದ್ದೇ ಸರ್ಕಾರವಿದ್ದಾಗ ಲಗೇಜ್ ದರ ಹೆಚ್ಚಿಸಿರಲಿಲ್ಲವೇ? ಟಿಕೆಟ್ ದರ ಹೆಚ್ಚಳವಾದಾಗ ಲಗೇಜ್ ದರವೂ ಏರಿಕೆಯಾಗುತ್ತದೆ. ನಾವು ಸ್ವಲ್ಪ ತಡವಾಗಿ ಮಾಡಿದ್ದೇವೆ ಅಷ್ಟೆ. ಅವರ ಸರ್ಕಾರದ ಅವಧಿಯಲ್ಲೂ ಮಾಡಿರಲಿಲ್ಲವೆ?’ ಎಂದು ತಿರುಗೇಟು ನೀಡಿದರು.

‘ದರ ಏರಿಕೆ ಕುರಿತು ಪ್ರತಿಕ್ರಿಯಿಸುವುದಕ್ಕೆ ಮುಂಚೆ, ಬಿಜೆಪಿಯವರು ತಮ್ಮ ಚರಿತ್ರೆಯನ್ನು ಸ್ವಲ್ಪ ನೋಡಿಕೊಳ್ಳಲಿ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧ ಪಕ್ಷಗಳಿಗೆ ಸದನದಲ್ಲೇ ಉತ್ತರ ಕೊಟ್ಟಿದ್ದಾರೆ. ಸದ್ಯ ಬಸ್‌ನಲ್ಲಿ 30 ಕೆ.ಜಿ.ವರೆಗಿನ ಲಗೇಜ್‌ ಉಚಿತವಾಗಿ ಸಾಗಿಸಬಹುದು. ಅದಕ್ಕೂ ಹೆಚ್ಚಿನ ತೂಕವಿದ್ದರೆ ದರ ಅನ್ವಯವಾಗಲಿದೆ. ಹಿಂದೆ ಬಿಜೆಪಿಯವರ ದರ ಹೆಚ್ಚಿಸಿದಾಗ ಕೈಯಿಂದ ಕೊಟ್ಟಿದ್ರಾ? ನಾವೂ ಕೈಯಿಂದ ಕೊಡುತ್ತಿಲ್ಲ. ಜನರ ತೆರಿಗೆ ಹಣದಿಂದ ತೆಗೆದು ಮರಳಿ ಜನರಿಗೇ ಕೊಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.