ADVERTISEMENT

ಶಿವರಾಮೇಗೌಡರಿಗೆ ಟಿಕೆಟ್‌: ಜಾಲತಾಣಗಳಲ್ಲಿ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:19 IST
Last Updated 16 ಅಕ್ಟೋಬರ್ 2018, 19:19 IST

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಯಾಗಿ ಎಲ್‌.ಆರ್‌.ಶಿವರಾಮೇಗೌಡ ಅವರನ್ನು ಕಣಕ್ಕಿಳಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುಮಾರು 20 ವರ್ಷಗಳ ಹಿಂದೆ ನಾಗಮಂಗಲದಲ್ಲಿ ವಕೀಲ ಮತ್ತು ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಅವರ ಕೊಲೆ ನಡೆದಿತ್ತು. ಅದರಲ್ಲಿ ಸಶಿವರಾಮೇಗೌಡರ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು.

ಆ ಸಂದರ್ಭದಲ್ಲಿ ನಾಗಮಂಗಲದಲ್ಲಿ ಶಿವರಾಮೇಗೌಡರ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ಪ್ರಗತಿಪರರು, ರೈತ ಮುಖಂಡರು, ನಾಗಮಂಗಲದ ಜನರು ಸೇರಿದ್ದರು. ಆ ಪ್ರತಿಭಟನೆಗೆ ಸ್ವಯಂ ಪ್ರೇರಣೆಯಿಂದ ಬಂದಿದ್ದ ಎಚ್‌.ಡಿ.ದೇವೇಗೌಡರು ಮುಂಚೂಣಿಯಲ್ಲಿ ನಿಂತು ಶಿವರಾಮೇಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದೂ ಅಲ್ಲದೆ, ಅವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧವೂ ಹರಿಹಾಯ್ದಿದ್ದರು ಎಂದು ಜಾಲತಾಣಿಗರು ಟೀಕಿಸಿದ್ದಾರೆ.

ADVERTISEMENT

ರೌಡಿ ರಾಜಕಾರಣಕ್ಕೆ ತೆರೆ ಎಳೆಯುವುದಾಗಿ ಘೋಷಿಸಿಯೂ ಹೋಗಿದ್ದರು. ಈಗ ಅದೇ ದೇವೇಗೌಡರು ಶಿವರಾಮೇಗೌಡರಿಗೆ ಕರೆದು ಟಿಕೆಟ್‌ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೊಗಳಿ ಭಾಷಣ ಮಾಡಲು ದೇವೇಗೌಡರು ಬರುತ್ತಾರೆ ಎಂದು ಜಾಲತಾಣದಲ್ಲಿ ಸಂತೋಷ್‌ ಎಂಬುವರು ಕಟಕಿಯಾಡಿದ್ದಾರೆ.ಫೇಸ್‌ ಬುಕ್‌ ಮತ್ತು ವಾಟ್ಸ್ಆ್ಯಪ್‌ನಲ್ಲಿ ಈ ರೀತಿಯ ಹಲವು ಪೋಸ್ಟ್‌ಗಳು ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.