ಡಿ.ಕೆ. ಶಿವಕುಮಾರ್
ಪ್ರಜಾವಾಣಿ ಚಿತ್ರ
ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿ ಕಾರ್ಯನಿಮಿತ್ತ ಅಚ್ಚುಕಟ್ಟು ವ್ಯಾಪ್ತಿಯ ಬೇಸಿಗೆ ಬೆಳೆಗಳಿಗೆ ನೀರು ಹರಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಬಸನಗೌಡ ತುರುವಿಹಾಳ, ಜಿ.ಜನಾರ್ದನ ರೆಡ್ಡಿ ಅವರು ಪ್ರಸ್ತಾಪಿಸಿದ ‘ತುಂಗಭದ್ರಾ ಜಲಾಶಯದ ಜ್ವಲಂತ ಸಮಸ್ಯೆಗಳು‘ ಕುರಿತ ಚರ್ಚೆಗೆ ಅವರು ಉತ್ತರ ನೀಡಿದರು.
ರೈತರ ಒತ್ತಾಯಕ್ಕೆ ಮಣಿದು ನೀರು ಹರಿಸಿದರೆ ಗೇಟ್‌ಗಳ ದುರಸ್ತಿ ಸಾಧ್ಯವಾಗುವುದಿಲ್ಲ. ಹಾಗಾಗಿ, ಬೇಸಿಗೆ ಬೆಳೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಸಮ್ಮತಿಸಿವೆ ಎಂದು ಮಾಹಿತಿ ನೀಡಿದರು.
ಹಿಂದೆ ಗೇಟ್ ಕೊಚ್ಚಿಕೊಂಡು ಹೋದಾಗ ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಲು ಜಲಾಶಯದ ಸುರಕ್ಷತಾ ತಜ್ಞರು ವರದಿ ನೀಡಿದ್ದರು. ಗೇಟ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ. 105.788 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದ ನೀರನ್ನು 80 ಟಿಎಂಸಿ ಅಡಿಗೆ ನಿಲ್ಲಿಸಲಾಗಿದೆ. ನಾಲೆಗಳಿಗೆ 9,951 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಮಳೆಗಾಲದ ಬೆಳೆಗೆ ಅಗತ್ಯವಿರುವ ನೀರು ಹರಿಸಿದ ನಂತರ ನೀರು ನಿಲ್ಲಿಸಲಾಗುವುದು. 2026ನೇ ಜೂನ್ 20ರ ನಂತರ ಮತ್ತೆ ಕಾಲುವೆಗೆ ನೀರು ಹರಿಸಲಾಗುವುದು ಎಂದರು.
ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೈತರು ಇದೇ ನೀರನ್ನು ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ. ಪ್ರತಿ ವರ್ಷ ಎರಡು ಭತ್ತದ ಬೆಳೆಗಳನ್ನು ಬೆಳೆಯಲು ಈ ನೀರು ಆಸರೆಯಾಗಿದೆ. ಬೇಸಿಗೆಯಲ್ಲಿ ನೀರು ಸಿಗುವುದಿಲ್ಲ. ನಾಲ್ಕು ಜಿಲ್ಲೆಗಳ ರೈತರು, ಜನ ಪ್ರತಿನಿಧಿಗಳು ಸಹಕರಿಸಬೇಕು ಎಂದು ಕೋರಿದರು.
‘ಗೇಟ್ ಅಳವಡಿಸುವ ಸಂಪೂರ್ಣ ಅಧಿಕಾರವನ್ನು ತುಂಗಭದ್ರಾ ಮಂಡಳಿಗೆ ನೀಡಲಾಗಿದೆ. ಕೇಂದ್ರ ಜಲ ಆಯೋಗವೂ ಮಾರ್ಗದರ್ಶನ ನೀಡುತ್ತಿದೆ. ಪೋಲಾಗುವ ಹೆಚ್ಚುವರಿ 50 ಟಿಎಂಸಿ ಅಡಿ ನೀರು ಸಂಗ್ರಹಿಸಲು ನವಲಿ ಜಲಾಶಯ ಸೇರಿದಂತೆ ಇತರೆ ಸಮತೋಲನ ಜಲಾಶಯಗಳನ್ನು ಸಿದ್ಧಪಡಿಸುವ ಕುರಿತು ಎರಡೂ ರಾಜ್ಯಗಳ ಜತೆ ಚರ್ಚಿಸಲಾಗುವುದು. ಆಂಧ್ರಪ್ರದೇಶ ಮುಖ್ಯಮಂತ್ರಿ ಸಮಯಕ್ಕಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.