
ನವದೆಹಲಿ: ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ ರಸ್ತೆಯನ್ನು ಎರಡು ಲೇನ್ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸುವ ಉದ್ದೇಶದಿಂದ ಕಾರ್ಯಸಾಧ್ಯತಾ ಅಧ್ಯಯನ ಹಾಗೂ ವಿವರವಾದ ಯೋಜನಾ ವರದಿ ತಯಾರಿಸಲು ಕೇಂದ್ರ ಭೂಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿದೆ.
ಡಿಪಿಆರ್ ವ್ಯಾಪ್ತಿಯು ನಿರ್ದಿಷ್ಟವಾಗಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರ ತೊಡಗಿಸಿಕೊಳ್ಳುವಿಕೆ ಒಳಗೊಂಡಿದ್ದು, ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯಸಾಧ್ಯತೆ ಪರೀಕ್ಷಿಸಲು, ವಿವರವಾದ ಭೂ-ತಾಂತ್ರಿಕ ಪರಿಶೀಲನೆಗೆ ಮೀಸಲಾದ ಬಜೆಟ್ ನಿಬಂಧನೆಗಳೊಂದಿಗೆ ಅವಕಾಶ ಕಲ್ಪಿಸಲಾಗಿದೆ. ‘ದಶಕಗಳಿಂದಲೂ ಬಾಕಿ ಉಳಿದಿದ್ದ ಆಗುಂಬೆ ಘಾಟ್ ಮೇಲ್ದರ್ಜೆಗೇರಿಸುವ ಜನರ ಬೇಡಿಕೆಗೆ ಇದು ಸ್ಪಷ್ಟ ಹೆಜ್ಜೆಯಾಗಿದೆ‘ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
‘ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಹಾಗೂ ಅಪಾಯಕಾರಿ ಹಾಗೂ ಅಪಘಾತಗಳಿಗೆ ಹೆಸರಾದ ಆಗುಂಬೆ ಘಾಟ್ ರಸ್ತೆಯ ಸುರಕ್ಷತೆ ಹೆಚ್ಚಿಸುವುದು, ಪಶ್ಚಿಮ ಘಟ್ಟ ಪ್ರದೇಶದ ಪ್ರಕೃತಿ ಸಂವೇದನಾಶೀಲತೆಗೆ ಗೌರವ ನೀಡುತ್ತಲೇ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಕೈಗೊಳ್ಳುವುದು ಈ ಯೋಜನೆಯ ಮುಖ್ಯ ಗುರಿ‘ ಎಂದು ರಾಘವೇಂದ್ರ ಹೇಳಿದ್ದಾರೆ.
‘ಘಾಟ್ ರಸ್ತೆ ಅಭಿವೃದ್ಧಿಯಿಂದ ಮಲೆನಾಡು - ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಹೊಸ ದಿಕ್ಕು ಲಭ್ಯವಾಗಲಿದ್ದು, ಸ್ಥಳೀಯ ನಿವಾಸಿಗಳು, ರೈತರು, ಅಕ್ಕಪಕ್ಕದ ಜಿಲ್ಲೆಗಳು, ಪ್ರವಾಸೋದ್ಯಮ ಹಾಗೂ ತುರ್ತು ಸೇವೆಗಳಿಗೆ ಗಣನೀಯ ಲಾಭವಾಗಲಿದೆ‘ ಎಂದು ಅವರು ಹೇಳಿದರು.
ಮುಂದಿನ ಹಂತಗಳಲ್ಲಿ ಯೋಜನೆ ಸುಗಮವಾಗಿ ಸಾಗಲು ಕೇಂದ್ರದೊಂದಿಗೆ ನಿರಂತರ ಸಮನ್ವಯ ಮುಂದುವರಿಸಲಾಗುವುದು. ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು‘ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.