ADVERTISEMENT

ಒಂದು ಹುದ್ದೆಗೆ ಇಬ್ಬರು ಅಧಿಕಾರಿಗಳ ಗಲಾಟೆ: ಅಪೆಕ್ಸ್ ಬ್ಯಾಂಕ್ CEO ಕಚೇರಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 16:14 IST
Last Updated 13 ಜನವರಿ 2025, 16:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ಕಿತ್ತಾಟ ಆರಂಭವಾಗಿದೆ. ಕೆಎಎಸ್‌ ಅಧಿಕಾರಿ ಎಂ.ಕೆ. ಜಗದೀಶ್ ಅವರನ್ನು ನೇಮಿಸಿದ ಬೆನ್ನಲ್ಲೇ ಈ ಹುದ್ದೆಯಲ್ಲಿದ್ದ ಸಿ.ಎನ್. ದೇವರಾಜು ಕಚೇರಿ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಸಹಕಾರ ಇಲಾಖೆಗಳ ಅಧಿಕಾರಿಯಾಗಿದ್ದ ದೇವರಾಜು ಅವರು, ಈಗಿನ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಲ್ಲಿನ ಸಿಇಒ ಆಗಿದ್ದರು. ಕೆಲಸದಿಂದ ವಯೋನಿವೃತ್ತಿ ಹೊಂದಿದ್ದ ಅವರನ್ನು 2023ರ ಮೇ ತಿಂಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಇಒ ಹುದ್ದೆಗೆ ಪುನಃ ನೇಮಿಸಲಾಗಿತ್ತು.

ADVERTISEMENT

ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ವರ್ಗಾವಣೆಯಾದ ಬಳಿಕ ಸ್ಥಳ ನಿರೀಕ್ಷಣೆಯಲ್ಲಿದ್ದ ‘ಸೂಪರ್‌ ಟೈಂ’ ವೇತನ ಶ್ರೇಣಿಯ ಕೆಎಎಸ್‌ ಅಧಿಕಾರಿ ಎಂ.ಕೆ. ಜಗದೀಶ್ ಅವರನ್ನು ಅಪೆಕ್ಸ್‌ ಬ್ಯಾಂಕ್‌ ಸಿಇಒ ಹುದ್ದೆಗೆ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಮಧ್ಯಾಹ್ನ ಆದೇಶ ಹೊರಡಿಸಿದೆ.

ವರ್ಗಾವಣೆ ಆದೇಶದಂತೆ ಅಧಿಕಾರ ವಹಿಸಿಕೊಳ್ಳಲು ಜಗದೀಶ್ ಅವರು ಅಪೆಕ್ಸ್‌ ಬ್ಯಾಂಕ್‌ ಸಿಇಒ ಕಚೇರಿಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹೋದರು. ಅಷ್ಟರಲ್ಲಿ ದೇವರಾಜು ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಅವರನ್ನು ಸಂಪರ್ಕಿಸಿ, ಕಚೇರಿ ಬಾಗಿಲಿನ ಬೀಗ ತೆಗೆಯುವಂತೆ ಮನವಿ ಮಾಡುವ ಪ್ರತ್ನವೂ ಫಲಿಸಲಿಲ್ಲ.

ಸ್ವಯಂ ಅಧಿಕಾರ ಸ್ವೀಕಾರ: ಗಂಟೆಗಳ ಕಾಲ ಕಾದರೂ ದೇವರಾಜು ಮರಳಿ ಕಚೇರಿಯತ್ತ ಬರಲಿಲ್ಲ. ನಂತರ ಜಗದೀಶ್ ಅವರು ಬೇರೊಂದು ಕೊಠಡಿಯಲ್ಲಿ ಕುಳಿತು ಅಪೆಕ್ಸ್‌ ಬ್ಯಾಂಕ್‌ ಸಿಇಒ ಹುದ್ದೆಯ ಅಧಿಕಾರವನ್ನು ತಾವೇ ವಹಿಸಿಕೊಂಡು, ಸಹಕಾರ ಇಲಾಖೆಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಗದೀಶ್, ‘ರಾಜ್ಯ ಸರ್ಕಾರದ ಆದೇಶದಂತೆ ನಾನು ಅಪೆಕ್ಸ್‌ ಬ್ಯಾಂಕ್‌ ಸಿಇಒ ಹುದ್ದೆಯ ಅಧಿಕಾರ ವಹಿಸಿಕೊಳ್ಳಲು ಬಂದಿದ್ದೆ. ಹಾಲಿ ಸಿಇಒ ಅವರು ಕಚೇರಿ ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು. ಅನಿವಾರ್ಯವಾಗಿ ನಾನು ಸ್ವಯಂಪ್ರೇರಿತವಾಗಿ ಅಧಿಕಾರ ವಹಿಸಿಕೊಂಡಿದ್ದೇನೆ’ ಎಂದರು.

ಸಚಿವರ ಸೂಚನೆಯಂತೆ ಅಧಿಕಾರ ಹಸ್ತಾಂತರಿಸಿಲ್ಲ: ದೇವರಾಜು

‘ಅಧಿಕಾರ ಹಸ್ತಾಂತರಿಸುವುದು ಬೇಡ ಎಂದು ಸಹಕಾರ ಸಚಿವರು ಸೂಚಿಸಿದ್ದರು. ಸಚಿವರ ಸೂಚನೆಯನ್ನು ನಾನು ಪಾಲಿಸಿದ್ದೇನೆ’ ಎಂದು ಅಪೆಕ್ಸ್‌ ಬ್ಯಾಂಕ್‌ ಸಿಇಒ ಹುದ್ದೆಯಲ್ಲಿದ್ದ ಸಿ.ಎನ್‌. ದೇವರಾಜು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಪೆಕ್ಸ್‌ ಬ್ಯಾಂಕ್‌ ಸಿಇಒ ಹುದ್ದೆಗೆ ಕೆಎಎಸ್‌ ಅಧಿಕಾರಿಯನ್ನು ನೇಮಿಸಲು ಅವಕಾಶವಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅನುಮತಿ ಪಡೆದೇ ಅಪೆಕ್ಸ್‌ ಬ್ಯಾಂಕ್‌ ಸಿಇಒ ನೇಮಿಸಬೇಕಾಗುತ್ತದೆ. ನನ್ನನ್ನು ನೇಮಿಸುವಾಗ ಪೂರ್ವಾನುಮತಿ ಪಡೆಯಲಾಗಿತ್ತು. ಜಗದೀಶ್‌ ನೇಮಕದಲ್ಲಿ ಅಂತಹ ಕ್ರಮ ಅನುಸರಿಸಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.