ಬೆಂಗಳೂರು: ರಾಜ್ಯದಲ್ಲಿ ಸೆ. 15ರಿಂದ ಒಟ್ಟು 45 ಕೆಲಸದ ದಿನ, ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಮತ್ತು 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ. ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ನಡೆಯುತ್ತಿರುವುದು ವಿಶೇಷ.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲಿರುವ ಈ ಸಮೀಕ್ಷೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.
ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಈ ಸಮೀಕ್ಷೆಗಳನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ. ಎರಡೂ ಸಮೀಕ್ಷೆಗಳು ಪ್ರತ್ಯೇಕವಾಗಿ ನಡೆಯಲಿವೆ. ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ‘ಕರ್ಮಣಿ ವೆಬ್ ಅಪ್ಲಿಕೇಷನ್’ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸೇವಾ ಸಿಂಧು ಮೂಲಕ ‘ಮಾಜಿ ದೇವದಾಸಿಯರ ಮಹಿಳೆಯರ ಮರು ಸಮೀಕ್ಷೆ ವೆಬ್ ಅಪ್ಲಿಕೇಷನ್’ ಸಿದ್ಧಪಡಿಸಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು. ಮಾಜಿ ದೇವದಾಸಿಯರ ಮರು ಸಮೀಕ್ಷೆಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು. ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯು ಅದೇ ಸಮುದಾಯದವರ ಮೂಲಕವೇ ನಡೆಯಲಿರುವುದು ವಿಶೇಷವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು ಇದ್ದರು.
ಸಮೀಕ್ಷೆಗಳ ವಿಶೇಷತೆ
* ಮೊಬೈಲ್ ಆ್ಯಪ್ ಬಳಕೆ
* ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಂಡ ಸಮಿತಿ
* ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಮಾಜಿ ದೇವದಾಸಿ ಮಹಿಳೆಯರ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಂತರಿಕ ಸಮಿತಿ
* ಜಿಲ್ಲಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಂದ ಸಮನ್ವಯ * ಎರಡೂ ಸಮೀಕ್ಷೆಗಳ ಸಹಾಯವಾಣಿ– 1800 599 2025
ಯಾವೆಲ್ಲ ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಸಮೀಕ್ಷೆ
ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.