ಸರ್ಕಾರಿ ಶಾಲೆ
ಬೆಂಗಳೂರು: ಕರ್ನಾಟಕದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 308ಕ್ಕೆ ಇಳಿದಿದೆ. ಕಳೆದ ಸಾಲಿನಲ್ಲಿ ಇಂತಹ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ 1,572 ಇತ್ತು.
ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ 2024–24ನೇ ಸಾಲಿನ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡೈಸ್) ವರದಿ ಪ್ರಕಾರ, ವಿದ್ಯಾರ್ಥಿಗಳ ದಾಖಲೆ ಹೆಚ್ಚಿರುವ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ, ಸರ್ಕಾರ ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿ ಶಿಕ್ಷಕರನ್ನು ಉಳಿಸಿಕೊಂಡಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದೆ. ಹಾಗೆಯೇ, ಶೂನ್ಯ ದಾಖಲೆ ಹೊಂದಿದ್ದ ಶಾಲೆಗಳ ಸಂಖ್ಯೆ 1,078ರಿಂದ 270ಕ್ಕೆ ಇಳಿಕೆಯಾಗಿದೆ.
‘ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚಬಾರದು ಎಂಬ ಸರ್ಕಾರದ ನೀತಿಗೆ ಅನುಗುಣವಾಗಿ ಅಂತಹ ಶಾಲೆಗಳಲ್ಲಿ ಒಬ್ಬ ಶಿಕ್ಷಕರನ್ನು ಉಳಿಸಿಕೊಂಡಿದ್ದೇವೆ. ಶಿಕ್ಷಕರು ಇದ್ದಾರೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಕಳುಹಿಸುವ ಸಾಧ್ಯತೆ ಇರುತ್ತದೆ. ಕೆಲವು ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗಾಗಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ’ ಎಂದು ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿದ ಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ವರದಿ ಪ್ರಕಾರ ಕರ್ನಾಟಕದಲ್ಲಿ 74,859 ಶಾಲೆಗಳಿದ್ದು, 1,17,80,251 ವಿದ್ಯಾರ್ಥಿಗಳು ಹಾಗೂ 4,52,602 ಶಿಕ್ಷಕರು ಇದ್ದಾರೆ. ಶೇ 69ರಷ್ಟು ಶಿಕ್ಷಕರು ಮಾತ್ರ ತರಬೇತಿ ಪಡೆದಿದ್ದಾರೆ. ಶೇ 63.7ರಷ್ಟು ಶಿಕ್ಷಕರು ವೃತ್ತಿಪರ ಅರ್ಹತೆ ಹೊಂದಿದ್ದಾರೆ. 2.23 ಲಕ್ಷ ವಿದ್ಯಾರ್ಥಿಗಳಿರುವ 7,349 ಏಕ ಶಿಕ್ಷಕರ ಶಾಲೆಗಳಿವೆ. ಕಳೆದ ವರ್ಷ 2,74,814 ವಿದ್ಯಾರ್ಥಿಗಳಿದ್ದ 7,821 ಏಕಶಿಕ್ಷಕರ ಶಾಲೆಗಳಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.