
ಬೆಂಗಳೂರು: ರಾಜ್ಯದ ಜೈಲುಗಳಲ್ಲಿನ ವಿಚಾರಣಾಧೀನ ಕೈದಿಗಳು ಹಾಗೂ ಇತರೆ ಕೈದಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ನಿಯಂತ್ರಿಸುವಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು, ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಜೈಲಧಿಕಾರಿಗಳಿಗೆ ತಿಳಿಸಿದ್ದಾರೆ.
ಸೂತ್ತೋಲೆಯಲ್ಲಿ ಏನಿದೆ?: ರಾಜ್ಯದ ಎಲ್ಲ ಜೈಲುಗಳಲ್ಲಿ ಹೊರಗಿನಿಂದ ಆಹಾರವನ್ನು ಅನುಮತಿಸುವಂತಿಲ್ಲ. ಬೆಂಗಳೂರು ಜೈಲಿನ ಆಹಾರವನ್ನು ಎಫ್‌ಎಸ್‌ಎಸ್‌ಎಐ ಪ್ರಮಾಣೀಕರಿಸಿದೆ ಮತ್ತು ಉತ್ತಮ ಗುಣಮಟ್ಟದ್ದಾಗಿದೆ. ಆದ್ದರಿಂದ ಹೊರಗಿನಿಂದ ಬೇಯಿಸಿದ ಆಹಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಜೈಲಿನ ನಿಯಾಮವಳಿ ಪ್ರಕಾರ ಆಹಾರ, ಬಟ್ಟೆ, ಹಾಸಿಗೆ ನೀಡಲಾಗುತ್ತದೆ. ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಕೊಡುವ ಹೊದಿಕೆ ಬಳಸಬೇಕು. ಹೆಚ್ಚುವರಿಯಾಗಿ ಒಂದು ಹೊದಿಕೆ ನೀಡಲಾಗುತ್ತದೆ. ಹಾಸಿಗೆಯ ಸೌಲಭ್ಯ ಇರುವುದಿಲ್ಲ. ಇನ್ನು ಸಂದರ್ಶನ ವೇಳೆ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆಗೆ ಸೂಚಿಸಲಾಗಿದೆ.
ಬೇಯಿಸದ ಮತ್ತು ಪ್ಯಾಕ್ ಮಾಡಿರುವ ಆಹಾರ ನೀಡಲು ಅವಕಾಶವಿದ್ದು, ಬಾಳೆಹಣ್ಣು, ಸೇಬು, ಸೀಬೆಹಣ್ಣು, ಸಪೋಟ ಸೇರಿ 2 ಕೆ.ಜಿ.ಯಷ್ಟು ನೀಡಬಹುದು. ಡ್ರೈಫ್ರೂಟ್ಸ್, ಬೇಕರಿ ತಿನಿಸು ಸೇರಿ 500 ಗ್ರಾಂ ಮೀರುವಂತಿಲ್ಲ. ವಿಚಾರಣಾಧೀನ ಕೈದಿಗಳಿಗೆ ಎರಡು ಜತೆ ಬಟ್ಟೆ, ಎರಡು ಒಳ ಉಡುಪು ನೀಡಬಹುದು. ಈ ರೀತಿಯ ಆಹಾರ ಬರುವಾಗ ಕಡ್ಡಾಯವಾಗಿ ಜೈಲಿನಲ್ಲಿ ದೈಹಿಕ ತಪಾಸಣೆ, ಭದ್ರತಾ ತಪಾಸಣೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೈದಿಗಳು ಮತ್ತು ಶಿಕ್ಷೆಗೊಳಗಾಗದ ಕ್ರಿಮಿನಲ್ (ವಿಚಾರಣೆಯಲ್ಲಿರುವ) ಕೈದಿಗಳು ಸೇರಿ ಎಲ್ಲಾ ಕೈದಿಗಳಿಗೆ ಕರ್ನಾಟಕ ಕಾರಾಗೃಹ ಕಾಯ್ದೆ, 1963, ಕರ್ನಾಟಕ ಕಾರಾಗೃಹ ನಿಯಮಗಳು, 1974 ಮತ್ತು ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ, 2021 ರ ಪ್ರಕಾರ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯು ಈಗಾಗಲೇ ಸಾಕಷ್ಟು ಆಹಾರ, ಬಟ್ಟೆ ಮತ್ತು ಹಾಸಿಗೆಗಳನ್ನು ಒದಗಿಸುತ್ತಿದೆ.
ಕಾರಾಗೃಹ ಡಿಜಿಪಿ ಅವರ ಹೊಸ ಸುತ್ತೋಲೆಯಿಂದ, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ದರ್ಶನ್ ಹೆಚ್ಚುವರಿ ಬ್ಲಾಂಕೆಟ್ ಸೌಲಭ್ಯಕ್ಕೆ ಕುತ್ತು ಎದುರಾಗಿದೆ. ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ಮನೆ ಊಟಕ್ಕೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸಬಹುದು ಎಂದು ಮೌಖಿಕವಾಗಿ ಹೇಳಿತ್ತು. ಅದರ ಬೆನ್ನಲ್ಲೇ ಆಹಾರ ಮತ್ತು ಹೊದಿಕೆ ಬಗ್ಗೆ ಅಲೋಕ್ ಕುಮಾರ್ ಮಾರ್ಗಸೂಚಿ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.