ADVERTISEMENT

ನಿರ್ಮಲಾ ಅವರನ್ನು ಆಯ್ಕೆ ಮಾಡಿದ ರಾಜ್ಯದ ಶಾಸಕರಿಗೆ ಕೃತಜ್ಞತೆ: ಡಿಕೆಶಿ ವ್ಯಂಗ್ಯ

ಶೂನ್ಯ ಬಜೆಟ್‌ ಎಂದು ಕಾಂಗ್ರೆಸ್ ವಾಗ್ದಾಳಿ

ಐಎಎನ್ಎಸ್
Published 1 ಫೆಬ್ರುವರಿ 2022, 14:55 IST
Last Updated 1 ಫೆಬ್ರುವರಿ 2022, 14:55 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಹೊಸತೇನು ಇಲ್ಲ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ. ಇದು ಶೂನ್ಯ ಬಜೆಟ್‌ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಕೇಂದ್ರ ಬಜೆಟ್‌ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ ರಾಜ್ಯದ ಶಾಸಕರಿಗೆ ಕೃತಜ್ಞತೆ ಸಲ್ಲಿಸಬೇಕಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.

‘ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ಚುನಾಯಿತರಾಗಿದ್ದಾರೆ. ಅವರಿಗೆ ಸ್ವಲ್ಪ ಕೃತಜ್ಞತೆ ಇರುತ್ತದೆ ಎಂದು ನಾನು ಭಾವಿಸಿದೆವು. ಇದು ಕೇಂದ್ರ ಬಜೆಟ್ ಅಲ್ಲ. ಇದು ಕೋವಿಡ್ ಬಜೆಟ್ ಆಗಿದೆ’ ಎಂದು ಕಿಡಿಕಾರಿದ್ದಾರೆ.

ADVERTISEMENT

‘ನಮ್ಮ ರಾಜ್ಯದ 25 ಸಂಸದರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ಘೋಷಿಸದಿರುವುದು ಖಂಡನೀಯ’ ಎಂದಿದ್ದಾರೆ.

ತೆರಿಗೆ ವಿಧಿಸುವ ಮೂಲಕ ಕ್ರಿಪ್ಟೊಕರೆನ್ಸಿಯನ್ನು ಕಾನೂನುಬದ್ಧಗೊಳಿಸಲಾಗುತ್ತದೆ ಎಂದು ಬಿಜೆಪಿಯವರು ಘೋಷಿಸಿದ್ದಾರೆ. ಅದನ್ನು ಹೇಗೆ ಮಾಡುತ್ತಾರೆಂದು ನನಗೆ ತಿಳಿದಿಲ್ಲ. ಕಡಿಮೆ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ಯುವಜನತೆಯನ್ನು ವಂಚಿಸಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

‘ಕೊರೊನಾ ಪೀಡಿತರಿಗೆ, ಉದ್ಯಮಿಗಳಿಗೆ, ರೈತರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ. ಈ ಬಜೆಟ್ ಕಾರ್ಪೊರೇಟ್ ಲಾಬಿಗೆ ಅನುಕೂಲಕರವಾಗಿದೆ. ಇದರಿಂದ ಶ್ರೀಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ನನ್ನ 40 ವರ್ಷದ ರಾಜಕಾರಣದಲ್ಲಿ ಇಂತಹ ನಿರಾಶಾದಾಯಕ ಬಜೆಟ್ ಅನ್ನು ನೋಡಿರಲಿಲ್ಲ’ ಎಂದಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.