ADVERTISEMENT

ಮತಾಂತರ ವಿಚಾರದಲ್ಲಿ ರಾಜಕಾರಣ ಸಲ್ಲದು: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2023, 13:02 IST
Last Updated 19 ಜೂನ್ 2023, 13:02 IST
ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಯ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ.
ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಯ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ.   

ಚಿತ್ರದುರ್ಗ: ಶೋಷಿತ ಸಮುದಾಯಕ್ಕೆ ಆಸೆ, ಆಮಿಷ ತೋರಿಸಿ ಹಾಗೂ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಮತಾಂತರಕ್ಕೆ ನಿರ್ಬಂಧ ವಿಧಿಸಿದ್ದ ಕಾಯ್ದೆಯನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿರುವುದು ತಪ್ಪು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಬಲವಂತದ ಮತಾಂತರವನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ. ಈ ಕಾಯ್ದೆಯ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ, ಪಕ್ಷಗಳು ಬದಲಾದಂತೆ ಕಾಯ್ದೆ, ಕಾನೂನು ಬದಲಾವಣೆ ಮಾಡುವುದರಿಂದ ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗುತ್ತದೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾದಿಗ ಸಮುದಾಯ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವೆಡೆ ಇದೆ. ಆಂಧ್ರಪ್ರದೇಶದಲ್ಲಿರುವ ಮಾದಿಗ ಸಮುದಾಯ ಶೇ 90ರಷ್ಟು ಮತಾಂತರ ಆಗಿದೆ. ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿಯೂ ಮತಾಂತರ ಅವ್ಯಾಹತವಾಗಿ ನಡೆಯುತ್ತಿದೆ. ದೇಶದಲ್ಲಿರುವ ಬಡತನವನ್ನು ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ದೇಶದಲ್ಲಿ ಜಾತಿ ಆಧಾರದ ಮೇಲೆ ಮೀಸಲಾತಿ ನೀಡಲಾಗುತ್ತಿದೆ. ಮತಾಂತರದಿಂದ ಮೀಸಲಾತಿ ಸೌಲಭ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮಾದಿಗ ಸಮುದಾಯದ ಅಸ್ಮಿತೆ ಕಳೆದು ಹೋಗುತ್ತಿದೆ. ಶೋಷಿತರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್‌ ನಾಯಕರು ಆಲೋಚನೆ ಮಾಡಬೇಕಿದೆ’ ಎಂದು ಹೇಳಿದರು.

‘ಶಕ್ತಿ ಯೋಜನೆ ಅನುಷ್ಠಾನಗೊಳಿಸಿದ ಬಳಿಕ ಸರ್ಕಾರಿ ಬಸ್‌ಗಳು ಸಾಮರ್ಥ್ಯ ಮೀರಿ ಭರ್ತಿಯಾಗುತ್ತಿವೆ. 50 ಆಸನ ಸಾಮರ್ಥ್ಯದ ಬಸ್‌ಗಳಲ್ಲಿ ನೂರಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದ ರಸ್ತೆಗಳ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ಟೀಕಿಸಿದರು.

ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂಬುದು ಡಾ.ಬಿ.ಆರ್‌.ಅಂಬೇಡ್ಕರ್ ಅಪೇಕ್ಷೆಯಾಗಿತ್ತು. ಇದರಿಂದ ಸಂವಿಧಾನಕ್ಕೂ ಗೌರವ ಸಿಗಲಿದೆ. ಅಲ್ಪಸಂಖ್ಯಾತ ಸಮುದಾಯ ಕೂಡ ಸ್ವಾಗತಿಸುತ್ತಿದೆ.
ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.