ಸಿದ್ದರಾಮಯ್ಯ
ಬೆಂಗಳೂರು: ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಟ್ರಂಪ್ ಅವರು ಆಮದು ಸುಂಕ ಏರಿಸಿದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ರಾಹುಲ್ ಗಾಂಧಿಯವರ ಮಾತುಗಳನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅದು ಜಿಎಸ್‌ಟಿ, ನೋಟು ರದ್ದತಿ, ಚೀನಾದ ಆಕ್ರಮಣ, ಉದ್ಯಮಿ ಗೌತಮ್ ಅದಾನಿ–ಮೋದಿ ನಂಟು ಅಥವಾ ಕೋವಿಡ್ ವೈಫಲ್ಯಗಳು, ಕೃಷಿ ಕಾನೂನುಗಳು, ರಫೇಲ್ ಒಪ್ಪಂದ, ಪಿಎಂ ಕೇರ್ಸ್ ಮತ್ತು ಚುನಾವಣಾ ಬಾಂಡ್‌ಗಳಾಗಿರಬಹುದು.. ಹೀಗೆ ಈ ಎಲ್ಲಾ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರನ್ನು ಮೊದಲೇ ಟೀಕಿಸುವ ಮೂಲಕ ಅಪಹಾಸ್ಯ ಮಾಡಿದ್ದರು. ಆದರೆ, ರಾಹುಲ್ ಅವರು ಹೇಳಿದ್ದು ಸರಿ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೇ50ರಷ್ಟು ಸುಂಕ ಏರಿಕೆ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಎಚ್ಚರಿಕೆಯೂ ಭಿನ್ನವಾಗಿಲ್ಲ. ಟ್ರಂಪ್ ಅವರು ಸುಂಕ ಏರಿಕೆ ಮಾಡಿರುವುದು ಆರ್ಥಿಕ ಬ್ಲ್ಯಾಕ್‌ಮೇಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಿಂತ ಕೇವಲ ಪ್ರಚಾರಕ್ಕೆ ಆದ್ಯತೆ ನೀಡಿದ ಪರಿಣಾಮ ಹೀಗಾಗಿದೆ’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
‘2019ರಿಂದ ಪ್ರಧಾನಿ ಮೋದಿ ಅವರು ಟ್ರಂಪ್ ಅವರನ್ನು ಮೆಚ್ಚಿಸಲು ತಮ್ಮ ದಾರಿಯನ್ನು ಬಿಟ್ಟು ಹೊರನಡೆದಿದ್ದಾರೆ. ‘ಹೌಡಿ ಮೋದಿ’ಯಿಂದ ಹಿಡಿದು ‘ಮಗ’, ‘ಮಿಗ’ ಸೇರಿ ‘ಮೆಗಾ ಪಾಲುದಾರಿಕೆ’ ಎಂಬ ಪರಿಕಲ್ಪನೆಯವರೆಗೆ ಟ್ರಂಪ್ ಜತೆಗೆ ಗೆಳೆತನ ಬೆಳೆಸಿದ್ದರು. ಜತೆಗೆ, ಇಲಾನ್ ಮಸ್ಕ್ ಅವರನ್ನು ಸಹ ಮೆಚ್ಚಿಕೊಂಡಿದ್ದರು. ಆದರೆ, ಟ್ರಂಪ್ ಪ್ರಭಾವಿತರಾಗಲಿಲ್ಲ ಮತ್ತು ಇದನ್ನು ರಾಜತಾಂತ್ರಿಕತೆಯಾಗಿ ನೋಡಲಿಲ್ಲ. ಬದಲಾಗಿ ಮೋದಿ ಶರಣಾಗತಿಯಾಗಲಿ ಎಂದೇ ಬಯಸಿದ್ದರು’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
‘ಮೋದಿ ಅವರಿಗೆ ಟ್ರಂಪ್ ನೀಡಿದ ಬಹುಮಾನವೆಂದರೆ... ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ’ ಎಂದು ಟ್ರಂಪ್ 33 ಬಾರಿ ಹೇಳಿಕೊಂಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಸಂಬಂಧ ದ್ವೇಷ ಭಾಷಣ ಮಾಡಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಆತಿಥ್ಯ ವಹಿಸಿದ್ದರು. ಗಾಜಾದ ಮೇಲೆ ಇಸ್ರೇಲ್ ನಡೆಸಿದ ಕ್ರೂರ ದಾಳಿಯನ್ನು ಅವರು (ಟ್ರಂಪ್) ಬೆಂಬಲಿಸಿದ್ದರು. ಇಷ್ಟೆಲ್ಲಾ ಆದರೂ ಮೋದಿ ಅವರು ಮೌನವಾಗಿದ್ದರು’ ಎಂದು ಸಿದ್ದರಾಮಯ್ಯ ದೂರಿದ್ದಾರೆ.
‘ಈಗ ಟ್ರಂಪ್ ಅವರು ಭಾರತಕ್ಕೆ ಅನ್ಯಾಯದ ಸುಂಕಗಳನ್ನು ವಿಧಿಸುತ್ತಿದ್ದಾರೆ. ಇನ್ನೂ ಮುಂದುವರಿದು ಟ್ರಂಪ್ ಅವರು ರಷ್ಯಾದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ನಮ್ಮ ಸಾರ್ವಭೌಮತ್ವದ ಮೇಲಿನ ನೇರ ದಾಳಿಯಾಗಿದೆ. ಯಾವುದೇ ವಿದೇಶಿ ಶಕ್ತಿಯು ನಮ್ಮ ವ್ಯಾಪಾರ ಆಯ್ಕೆಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
1970ರ ದಶಕದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಮೆರಿಕದ ಒತ್ತಡದ ವಿರುದ್ಧ ದೃಢವಾಗಿ ನಿಂತಿದ್ದರು. ಗಾಂಧಿ ಕುಟುಂಬವನ್ನು ಟೀಕಿಸುವ ಬದಲು ಮೋದಿ ಅವರು ಪಾಠ ಕಲಿಯಬೇಕು. ಭಾರತದ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘ಲೋಕಸಭೆ ವಿರೋಧ ಪಕ್ಷದ ನಾಯಕನ (ರಾಹುಲ್ ಗಾಂಧಿ) ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸುವುದರಿಂದ ದೇಶಕ್ಕೆ ಸಾಕಷ್ಟು ನಷ್ಟವಾಗಿದೆ. ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮೋದಿ ಸರ್ಕಾರಕ್ಕೆ ಇದು ಸುಸಂದರ್ಭ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.