ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಆರೋಪಿ ವರ್ಮಾ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ಮೊದಲ ಆರೋಪಿ ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಅವರ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತಂತೆ ಸತ್ಯನಾರಾಯಣ ವರ್ಮಾ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ.

‘ಗುರುತರ ಆರೋಪದ ಪ್ರಕರಣಗಳಲ್ಲಿ, ಆರೋಪಿಗಳು ಪೂರ್ಣ ಪ್ರಮಾಣದ ವಿಚಾರಣೆಗೂ ಮುನ್ನವೇ ಹೊಸ ಅಂಶಗಳಿಲ್ಲದ, ಪುನರಾವರ್ತಿತ ಸವಾಲುಗಳನ್ನೇ ಮುಂದೆ ಮಾಡಿಕೊಂಡು ತಾವು ಸಾಚಾ ಎಂದು ನಿರೂಪಿಸಿಕೊಳ್ಳುವ ಅತ್ಯಾತುರದ ಪ್ರಯತ್ನಗಳಿಗೆ ಸೊಪ್ಪು ಹಾಕಲು ಆಗದು’ ಎಂಬ ನ್ಯಾಯಪೀಠ ಕಟು ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

‘ಒಂದು ಅರ್ಜಿಯಲ್ಲಿ ಪರಿಹಾರ ದೊರಕದಿದ್ದರೆ ಬೇರೊಂದು ಅಂಶಗಳನ್ನು ಹುಡುಕಿಕೊಂಡು ಮತ್ತೊಂದು ಹೊಸ ಅರ್ಜಿ ಸಲ್ಲಿಸಿದರೆ ಅವುಗಳನ್ನೆಲ್ಲಾ ರಿಟ್‌ ವ್ಯಾಪ್ತಿಯ ವಿಶಾಲತೆಯಲ್ಲಿ ಜಾಲಾಡುವುದು ಸಲ್ಲದ ನಡೆ. ಇಂತಹ ಹೆಜ್ಜೆಗಳಿಂದ ಪ್ರಕರಣದ ವಿಚಾರಣಾ ಗಂಭೀರತೆಗೆ ನಷ್ಟವುಂಟಾಗುತ್ತದೆ’ ಎಂದು ನ್ಯಾಯಪೀಠ ವಿವರಿಸಿದೆ.

ಸತ್ಯನಾರಾಯಣ ವರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 120ಬಿ, 409, 420, 467, 468, 471 ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13(1), 13(2)ರ ಅನ್ವಯ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಮತ್ತು ನಿಗಮದ ಪರ ಪದಾಂಕಿತ ಹಿರಿಯ ವಕೀಲ ವಿಕ್ರಮ ಹುಯಿಲಗೋಳ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.