ADVERTISEMENT

ಮಂಡ್ಯ ರೈತರಿಗೆ ನೀರು ಕೊಡಿ, ಜಿಂದಾಲ್‌ಗೆ ಭೂಮಿ ನೀಡಬೇಡಿ: ವಾಟಾಳ್‌ ಆಗ್ರಹ

ಜುಲೈ 28ರಂದು ಮೇಕೆದಾಟು ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 14:05 IST
Last Updated 28 ಜೂನ್ 2019, 14:05 IST
ರಾಮನಗರದ ಐಜೂರು ವೃತ್ತದಲ್ಲಿ ಶುಕ್ರವಾರ ವಾಟಾಳ್‌ ನಾಗರಾಜು ಪ್ರತಿಭಟನೆ ನಡೆಸಿದರು
ರಾಮನಗರದ ಐಜೂರು ವೃತ್ತದಲ್ಲಿ ಶುಕ್ರವಾರ ವಾಟಾಳ್‌ ನಾಗರಾಜು ಪ್ರತಿಭಟನೆ ನಡೆಸಿದರು   

ರಾಮನಗರ: ಒಂದು ತಿಂಗಳ ಒಳಗೆ ಮೇಕೆದಾಟು ಯೋಜನೆಗೆ ಚಾಲನೆ ನೀಡದೇ ಹೋದಲ್ಲಿ ಜುಲೈ 28ರಂದು ಮೇಕೆದಾಟಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜು ಹೇಳಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಶುಕ್ರವಾರ ಸಾಂಕೇತಿಕ ರಸ್ತೆ ತಡೆ ನಡೆಸಿ ಅವರು ಮಾತನಾಡಿದರು. ಮೇಕೆದಾಟು ವಿಚಾರದಲ್ಲಿ ರಾಜ್ಯ ಸರ್ಕಾರವು ಸುಳ್ಳು ಹೇಳುತ್ತಲೇ ಬಂದಿದೆ. ತಮಿಳುನಾಡು, ಕೇಂದ್ರದ ಬಳಿ ಮಾತನಾಡುತ್ತೇವೆ ಎಂದು ನಾಟಕವಾಡುತ್ತಲೇ ಇದೆ. ಹೀಗಿದ್ದರೆ ಯೋಜನೆ ಯಾವಾಗ ಆರಂಭಿಸುತ್ತೀರಿ? ಎಂದು ಪ್ರಶ್ನಿಸಿದರು.

ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು, ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಹೋಗುವಂತೆ ಮುಖ್ಯಮಂತ್ರಿ ಹೇಳುತ್ತಾರೆ. ಹಾಗಿದ್ದರೆ ರಾಜ್ಯದ ಜಲಾಶಯಗಳನ್ನು ಪ್ರಾಧಿಕಾರಕ್ಕೆ ಮಾರಿಬಿಟ್ಟಿದ್ದೀರಾ? ಪ್ರಾಧಿಕಾರವನ್ನು ನೀವು ಒಪ್ಪುತ್ತೀರಾ ಎಂಬುದನ್ನು ಸ್ಪಷ್ಟಪಡಿಸಬೇಕು. ಮಂಡ್ಯ ರೈತರಿಗೆ ನೀರು ಕೊಡದಿದ್ದರೆ ಹೋರಾಟ ನಡೆಸಲಾಗುವುದು ಎಂದರು.

ADVERTISEMENT

‘ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರಿಗೆ ಮೋದಿ ಎನ್ನುವುದನ್ನು ಬಿಟ್ಟರೆ ಮತ್ತೊಂದು ಶಬ್ದ ತಿಳಿದಿಲ್ಲ. ಅವರಿಗೆ ಕಾವೇರಿ, ಮೇಕೆದಾಟು, ಟಿಪ್ಪು ಸುಲ್ತಾನ್‌ ಯಾವುದೂ ಗೊತ್ತಿಲ್ಲ. ಸಂಸದರು ಇನ್ನಾದರೂ ಮಂಡ್ಯ ರೈತರಿಗೆ ನೀರು ಬಿಡಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟಗಾರರಿಗೆ ನೋಟಿಸ್‌: ‘1995ರಿಂದ ಈವರೆಗೆ ರಾಜ್ಯ ಸರ್ಕಾರಗಳು ಜಿಂದಾಲ್‌ ಕಂಪನಿಗೆ 11,500 ಎಕರೆ ಜಮೀನು ನೀಡಿವೆ. ಇದನ್ನು ವಿರೋಧಿಸಿ ಪ್ರತಿಭಟನೆಗೆ ಸಜ್ಜಾಗಿರುವ ಬಳ್ಳಾರಿ ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳಿಗೆ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಇದಕ್ಕೆ ನಾವು ಹೆದರುವುದಿಲ್ಲ. ಜುಲೈ 6ರಂದು ಪ್ರತಿಭಟನೆ ನಿಶ್ಚಿತ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಂದಾಲ್‌ಗೆ 3666 ಎಕರೆ ಜಮೀನು ನೀಡಬಾರದು’ ಎಂದು ಆಗ್ರಹಿಸಿದರು.

‘ಜಿಂದಾಲ್‌ ದೊಡ್ಡ ದರೋಡೆಕೋರ ಕಂಪನಿ. ತುಂಗಭದ್ರಾ ಜಲಾಶಯದಿಂದ 8 ಟಿಎಂಸಿಯಷ್ಟು ನೀರು ಬಳಸಿಕೊಳ್ಳುತ್ತಿದೆ. ಟಾರ್‌, ಬಣ್ಣದ ಕಾರ್ಖಾನೆಗಳನ್ನು ಮಾಡಲು ಹೊರಟಿದೆ. ಕಾರ್ಖಾನೆಗಳು ವಿಷ ಕಾರಲು ಹೊರಟಿವೆ’ ಎಂದು ದೂರಿದರು.

ಮಧ್ಯಂತರ ಚುನಾವಣೆ ಬೇಕು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಇದನ್ನು ಅರಿತೇ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಆರಂಭಿಸಿದ್ದಾರೆ. ಸಂಪುಟದ ಉಳಿದ ಮಂತ್ರಿಗಳು ಸಕ್ರಿಯರಾಗಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ ಮಧ್ಯಂತರ ಚುನಾವಣೆ ಬೇಕು. ಜನರು ಪ್ರಮುಖ ಪಕ್ಷಗಳನ್ನು ತಿರಸ್ಕರಿಸಿ, ಹೋರಾಟಗಾರರು, ರೈತರ ಗುಂಪುಗಳಿಗೆ ಬೆಂಬಲ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.