ಬಿ.ವೈ.ವಿಜಯೇಂದ್ರ
(ಸಂಗ್ರಹ ಚಿತ್ರ)
ಬೆಂಗಳೂರು: ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ(ವಿಬಿ–ಜಿ ರಾಮ್ ಜಿ) ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದ್ದು, ಈ ಯೋಜನೆ ಕುರಿತು ಜನ ಜಾಗೃತಿ ಮೂಡಿಸಲು ಇದೇ 15 ರಿಂದ ಫೆಬ್ರುವರಿ 28 ರವರೆಗೆ ರಾಜ್ಯ ವ್ಯಾಪಿ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಈ ಯೋಜನೆಯ ವಾಸ್ತವಿಕ ಸಂಗತಿಗಳು ಮತ್ತು ಪಾರದರ್ಶಕತೆ ಕುರಿತು ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಮಾಹಿತಿ ನೀಡಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಹೊಸ ಯೋಜನೆಯ ಕುರಿತು ಕಾಂಗ್ರೆಸ್ ನಾಯಕರು ನಕಾರಾತ್ಮಕ ಚಿತ್ರಣ ನೀಡುತ್ತಿದ್ದಾರೆ. ವಾಸ್ತವದಲ್ಲಿ ನರೇಗಾಗಿಂತ ‘ವಿಬಿ–ಜಿ ರಾಮ್ ಜಿ ’ ಒಂದು ಉತ್ತಮ ಯೋಜನೆಯಾಗಿದೆ. ನರೇಗಾ ವ್ಯವಸ್ಥಿತವಾಗಿ ಲೂಟಿ ಮಾಡುವ ಯೋಜನೆಯಾಗಿತ್ತು. ಹೀಗಾಗಿ ಸರ್ಕಾರದ ಪ್ರತಿಯೊಂದು ಪೈಸೆಯೂ ಸದ್ಭಳಕೆಯಾಗಬೇಕು ಮತ್ತು ಆಯಾ ಗ್ರಾಮಗಳಲ್ಲಿ ಶಾಶ್ವತ ಆಸ್ತಿ ನಿರ್ಮಾಣ ಆಗಬೇಕೆಂಬುದೇ ಪ್ರಧಾನಿ ಮೋದಿ ಅವರ ಉದ್ದೇಶ. ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗಿರುವುದನ್ನು ಸಹಿಸದ ಕಾಂಗ್ರೆಸ್ ಎಲ್ಲ ಯೋಜನೆಗಳಿಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಜಯೇಂದ್ರ ದೂರಿದರು.
ಜನಜಾಗೃತಿ ಅಭಿಯಾನಕ್ಕೆ ಪಿ.ರಾಜೀವ್, ಕೋಟ ಶ್ರೀನಿವಾಸ್ ಪೂಜಾರಿ, ಈರಣ್ಣ ಕಡಾಡಿ, ಎ.ಎಸ್.ಪಾಟೀಲ ನಡಹಳ್ಳಿ, ಎಸ್.ಆರ್.ವಿಶ್ವನಾಥ್ ಮತ್ತು ಇತರರನ್ನು ಒಳಗೊಂಡ ತಂಡಗಳನ್ನು ರಚಿಸಲಾಗುವುದು ಎಂದು ಹೇಳಿದರು.
ವಾಸ್ತವ ಅಂಶಗಳೇನು?
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಇತರ ನಾಯಕರು ಈ ಯೋಜನೆ ಕುರಿತು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಕಾಲ ಕಾಲಕ್ಕೆ ಅನುಗುಣವಾಗಿ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಪರಿಣಾಮ ತರುವ ನಿಟ್ಟಿನಲ್ಲಿ ಕೆಲವು ಯೋಜನೆಗಳಲ್ಲಿ ಪರಿಷ್ಕರಣೆ ಅಗತ್ಯ ಎಂದು ಹೇಳಿದರು.
ಕೆಲಸದ ದಿನ ಹಿಂದೆ 100 ಇತ್ತು, ಈಗ 125 ದಿನಗಳಿಗೆ ಹೆಚ್ಚಿಸಲಾಗಿದೆ. ಪ್ರತಿ ದಿನದ ಕೂಲಿ ₹370 ಇದೆ. ಇದರಿಂದ ಗುಳೇ ಹೋಗುವುದನ್ನು ತಡೆಯಬಹುದು.
ಗ್ರಾಮ ಪಂಚಾಯಿತಿ ಹಕ್ಕುಗಳನ್ನು ಮೊಟಕುಗೊಳಿಸಿಲ್ಲ. ಇನ್ನು ಮುಂದೆಯೂ ಗ್ರಾಮ ಪಂಚಾಯಿತಿಗಳೇ ಕೇಂದ್ರವಾಗಿರುತ್ತವೆ. ಗ್ರಾಮ ಪಂಚಾಯಿತಿಗಳನ್ನು ವಿಕಸಿತ ಗ್ರಾಮ ಪಂಚಾಯಿತಿಗಳನ್ನಾಗಿಸಲು ಇದು ಸಹಕಾರಿ.
ಈ ಮೊದಲು ಇದ್ದ ವಿಕೇಂದ್ರಿಕೃತ ಯೋಜನೆ ಈಗ ಸಂಘಟಿತ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳನ್ನು ಬ್ಲಾಕ್, ಜಿಲ್ಲೆ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟುಗೂಡಿಸಿ ಸಂಯೋಜನೆ ಮಾಡಲಾಗುತ್ತಿದೆ.
ಈ ಯೋಜನೆಯನ್ನು ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಯೋಜನೆಯ ಕಾಮಗಾರಿಗಳ ತ್ವರಿತ ಅನುಷ್ಠಾನ ಸಾಧ್ಯವಾಗಲಿದೆ.
ಕೂಲಿ ಪಾವತಿ ಸಮಯವನ್ನು ವಾರಕ್ಕೆ ಒಮ್ಮೆ ಅಥವಾ ಗರಿಷ್ಠ 14 ದಿನಗಳ ಒಳಗೆ ಪಾವತಿ ಕಡ್ಡಾಯಗೊಳಿಸಲಾಗಿದೆ.
ಮೋದಿಯವರು ಪ್ರಧಾನಿ ಆದ ಬಳಿಕ ಬಡತನ ಪ್ರಮಾಣ 2014 ರಲ್ಲಿ ಶೇ 25.7 ಇದ್ದದ್ದು ಕೇವಲ ಶೇ 4.86 ಕ್ಕೆ ಇಳಿದಿದೆ.
2013–14 ರಲ್ಲಿ ಈ ಯೋಜನೆಗೆ ಮೀಸಲಿಟ್ಟ ಬಜೆಟ್ ₹33 ಸಾವಿರ ಕೋಟಿ, ಈಗ ₹2.86 ಲಕ್ಷ ಕೋಟಿಗೆ ಏರಿದೆ. ಒಟ್ಟು ಕೆಲಸದ ದಿನಗಳು 2014 ರಲ್ಲಿ 1,660 ಕೋಟಿ ಇದ್ದರೆ, ಈಗ 3210 ಕೋಟಿಗೆ ಏರಿದೆ.
ಮೋದಿ ಪ್ರಧಾನಿ ಆದ ಬಳಿಕ ಈ ಯೋಜನೆಗೆ ಬಿಡುಗಡೆ ಮಾಡಿದ ಮೊತ್ತ ₹8.53 ಲಕ್ಷ ಕೋಟಿ.
ಪೂರ್ಣಗೊಂಡ ಕಾಮಗಾರಿಗಳು 2014 ರವರೆಗೆ 1.53 ಲಕ್ಷ ಇದ್ದರೆ, ಈಗ 8.62 ಕೋಟಿ. ಮಹಿಳೆಯರ ಭಾಗವಹಿಸುವಿಕೆ ಶೇ 48 ರಿಂದ ಶೇ 57 ಕ್ಕೆ ಏರಿದೆ.
ಕೇಂದ್ರದ ಹಣಕಾಸಿನ ಕೊಡುಗೆ ಮನಮೋಹನ್ ಸಿಂಗ್ ಅವಧಿಯಲ್ಲಿ ₹86 ಸಾವಿರ ಕೋಟಿ ಇತ್ತು, ಈಗ ₹2.95 ಲಕ್ಷ ಕೋಟಿಗೆ ಏರಿದೆ
ಕೃಷಿ ಕಟಾವು ಅವಧಿಯಲ್ಲಿ 60 ದಿನಗಳ ಬಿಡುವು ನೀಡಲಾಗಿದೆ. ಯುಪಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಶರದ್‌ಪವಾರ್ ಅವರು ಆಗ ಸಲ್ಲಿಸಿದ್ದ ಈ ಬೇಡಿಕೆಯನ್ನು ಈಗ ಈಡೇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.