ADVERTISEMENT

ದಸರಾ ಬಳಿಕ ತರಕಾರಿ ದರದಲ್ಲಿ ಏರುಪೇರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 2:21 IST
Last Updated 4 ನವೆಂಬರ್ 2020, 2:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ದಸರಾ ಬಳಿಕ ತರಕಾರಿ ದರಗಳಲ್ಲಿ ಏರಿಳಿತ ಕಂಡು ಬಂದಿವೆ. ದುಬಾರಿಯಾಗಿದ್ದ ತರಕಾರಿಗಳ ದರ ದಿಢೀರ್ ಕುಸಿದಿವೆ. ಅಗ್ಗವಾಗಿದ್ದ ತರಕಾರಿ ಬೆಲೆಗಳೂ ಏರಿವೆ.

ಈ ಸಲ ದಸರಾಕ್ಕೆ ತರಕಾರಿ ದುಬಾರಿ ಎನಿಸಿಕೊಳ್ಳಲಿಲ್ಲ. ಆದರೆ, ಭಾರಿ ಮಳೆಯಿಂದ ಹಾನಿಗೆ ಒಳಗಾಗಿದ್ದ ತರಕಾರಿಗಳು ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದ್ದವು. ಆವಕ ಪ್ರಮಾಣದ ಕುಸಿತದಿಂದ ಬೆಲೆಗಳು ಸಾಮಾನ್ಯವಾಗಿ ಏರಿದ್ದವು.

ಹೂಕೋಸು, ಎಲೆಕೋಸು, ಕ್ಯಾಪ್ಸಿಕಂ, ಮೆಣಸಿನಕಾಯಿ, ಬೀಟ್‍ರೂಟ್, ಬೆಂಡೆಕಾಯಿ, ಆಲೂಗಡ್ಡೆ ಬೆಲೆ ಏರಿಕೆ ಕಂಡಿವೆ. ಶುಂಠಿ ದರ ದಿಢೀರ್ ಕುಸಿದಿದ್ದು, ಪ್ರತಿ ಕೆ.ಜಿ.ಗೆ ₹50ರಿಂದ ₹80ರಂತೆ ಮಾರಾಟ ವಾಗುತ್ತಿದೆ. ಕ್ಯಾರೆಟ್, ಬೆಳ್ಳುಳ್ಳಿ, ಈರುಳ್ಳಿ ದರಗಳು ಪ್ರತಿದಿನವೂ ಏರಿಳಿತ ಕಾಣುತ್ತಿವೆ.

ADVERTISEMENT

‘ಈರುಳ್ಳಿಯ ಸಗಟು ದರ ಪ್ರತಿ ಕೆ.ಜಿಗೆ ₹70 ಹಾಗೂ ಆಲೂಗಡ್ಡೆಯ ದರ ಪ್ರತಿ ಕೆ.ಜಿಗೆ ₹40ರಷ್ಟು ಮಾತ್ರ ಇದೆ’ ಎಂದು ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಉದಯ್ ಶಂಕರ್ ತಿಳಿಸಿದರು.

‘ಬೇಡಿಕೆ ಇದ್ದ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದೆ. ಇದರಿಂದ ದುಬಾರಿಯಾಗಿದ್ದ ತರಕಾರಿಗಳ ದರ ಕೊಂಚ ಇಳಿದಿದೆ. ಚಳಿಗಾಲ ಆರಂಭಗೊಂಡಿರುವುದರಿಂದ ಈ ಅವಧಿಯಲ್ಲಿ ಬಳಕೆಯಾಗುವ ತರಕಾರಿಗಳ ದರ ಸಾಮಾನ್ಯವಾಗಿಯೇ ಏರತೊಡಗಿದೆ’ ಎನ್ನುತ್ತಾರೆ ದಾಸನಪುರ ಎಪಿಎಂಸಿ ಉಪ ಪ್ರಾಂಗಣದ ತರಕಾರಿ-ಸೊಪ್ಪು ವರ್ತಕ ಕುಮಾರ್.

ಚಕ್ಕೋತ ಸೊಪ್ಪು ದುಬಾರಿ: ಸೊಪ್ಪುಗಳಲ್ಲಿ ಚಕ್ಕೋತ ದರ ಏರಿದ್ದು, ಪ್ರತಿ ಕಟ್ಟಿಗೆ ₹30ರಂತೆ ಮಾರಾಟ ಆಗುತ್ತಿದೆ. ಕೊತ್ತಂಬರಿ ಹಾಗೂ ಪಾಲಕ್ ದರಗಳು ತಲಾ ₹5 ಹೆಚ್ಚಳ ಕಂಡಿವೆ. ದಂಟು, ಸಬ್ಬಕ್ಕಿ, ಮೆಂತ್ಯ ಹಾಗೂ ಹರಿವೆ ಸೊಪ್ಪಿನ ದರಗಳು ಕಡಿಮೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.