ADVERTISEMENT

ನಿಘಂಟು ತಜ್ಞ ಪ್ರೊ.ಜಿ ವೆಂಕಟಸುಬ್ಬಯ್ಯ ನಿಧನಕ್ಕೆ ಗಣ್ಯರಿಂದ ಸಂತಾಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 7:34 IST
Last Updated 19 ಏಪ್ರಿಲ್ 2021, 7:34 IST
ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ –ಪ್ರಜಾವಾಣಿ ಸಂಗ್ರಹ ಚಿತ್ರ/ ವಿಶ್ವನಾಥ ಸುವರ್ಣ
ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ –ಪ್ರಜಾವಾಣಿ ಸಂಗ್ರಹ ಚಿತ್ರ/ ವಿಶ್ವನಾಥ ಸುವರ್ಣ   

ಬೆಂಗಳೂರು: ಕನ್ನಡದ ನಿಘಂಟು ತಜ್ಞರೆಂದೇ ಪ್ರಸಿದ್ಧಿ ಹೊಂದಿರುವ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ ವೆಂಕಟಸುಬ್ಬಯ್ಯ (108) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

‘ಕನ್ನಡದ ವಿದ್ವಾಂಸ, ನಿಘಂಟು ತಜ್ಞ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ಅಗಲಿಕೆಯ ಸುದ್ದಿ ದುಃಖ ತಂದಿದೆ. ಅಕ್ಷರ ಲೋಕದ ಅಜಾತಶತ್ರು ಆಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಭಗವಂತನು ಕುಟುಂಬ- ಹಿತೈಷಿ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಟ್ವೀಟ್ ಮಾಡಿದ್ದಾರೆ.

‘ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಫ್ರೊ. ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

‘ನಾಡು-ನುಡಿಯ ಶ್ರೇಷ್ಠ ವಿದ್ವಾಂಸಕನನ್ನು ರಾಜ್ಯ ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಶ್ರೀಯುತರದು. ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದದ್ದು’ ಎಂದು ಸ್ಮರಿಸಿದ್ದಾರೆ.

‘ಭಾಷಾತಜ್ಞ, ಕನ್ನಡ ನಿಘಂಟು ತಜ್ಞ, ಬರಹಗಾರ, ಸಂಶೋಧಕ, ಚಿಂತಕ, ಪದ್ಮಶ್ರೀ ಪ್ರಶಸ್ತಿ ಪಡೆದ ಶತಾಯುಷಿ ಪ್ರೊ ಜಿ.ವೆಂಕಟಸುಬ್ಬಯ್ಯ ಅವರು ನಮ್ಮನ್ನಗಲಿದ್ದಾರೆ. ಅವರ ಕನ್ನಡ ಸೇವೆ ಅಪಾರ. ಅವರಿಗೆ ನನ್ನ ಭಾವ ಪೂರ್ಣ ಶೃದ್ಧಾಂಜಲಿ. ಆ ಮಹಾನ್ ಚೇತನಕ್ಕೆ ಅನಂತ ನಮನಗಳು’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

‘ಪರಮ ಗತಿ ಪಡೆದ ನಿಘಂಟು ತಜ್ಞ, ಭಾಷಾವಿದ್ವಾಂಸ ಮಹಾನ್ ಜೀವಿಗೆ ಅಂತಿಮ ನಮನಗಳು. ಪೂರ್ಣಬದುಕು, ಸಾರ್ಥಕ ಬದುಕು, ಆನಂದದ ಬದುಕು ಇವುಗಳಿಗೆ ಶ್ರೇಷ್ಠ ಉದಾಹರಣೆಯಾಗಿದ್ದ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಕನ್ನಡ ನಾಡು-ನುಡಿಗಳ ಸಾಧಕ, ಸೇವಕ, ಪೋಷಕ, ರಕ್ಷಕನಾಗಿ ಜೀವತೇಯ್ದರು. ಆದರ್ಶ ಶಿಕ್ಷಕನಾಗಿ, ಹೆಮ್ಮೆಯ ರಾಷ್ಟ್ರಕನಾಗಿ ಸಂಸ್ಕೃತಿಯ ದೀಪಸ್ತಂಭವಾಗಿದ್ದ ಅವರು ಚಿರಂ‘ಜೀವಿ’. ಇಹಯಾತ್ರೆ ಮುಗಿಸಿದ ಜಿವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು’
–ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ರಾ. ಸ್ವ. ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.