ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಪರಿಷತ್‌ನಲ್ಲಿ ಬುಧವಾರ ಮಂಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ ಬೀಳಿಸಲು ಹೋದ ಬಿಜೆಪಿ–ಜೆಡಿಎಸ್ ಸದಸ್ಯರು ಮತ ವಿಭಜನೆಗೆ ಕೇಳಿ, ತಾವೇ ಬೇಸ್ತುಬಿದ್ದ ಪ್ರಸಂಗ ನಡೆಯಿತು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದ ಮಸೂದೆ ಹಲವು ನಾಟಕೀಯ ಬೆಳವಣಿಗಳ ನಡುವೆ ಒಂದು ಮತದ ಅಂತರದಿಂದ ಅಂಗೀಕಾರ ಪಡೆಯಿತು.
ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ–ಜೆಡಿಎಸ್ ಸದಸ್ಯರು, ಮುಖ್ಯಮಂತ್ರಿಯನ್ನು ವಿಶ್ವವಿದ್ಯಾಲಯದ ಕುಲಾಧಿಪತಿ ಮಾಡುವ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಸರ್ಕಾರದ ನಡೆಯನ್ನು ಖಂಡಿಸಿದರು. ಮತವಿಭಜನೆಗೆ ಪಟ್ಟು ಹಿಡಿದರು.
ವಿರೋಧ ಪಕ್ಷಗಳ ಕೋರಿಕೆಯಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಸೂದೆ ಅಂಗೀಕಾರದ ಪ್ರಸ್ತಾವವನ್ನು ಮತ ವಿಭಜನೆಗೆ ಹಾಕಿದರು. ಪೂರ್ವಸಿದ್ಧತೆ ಮಾಡಿಕೊಳ್ಳದೆ, ಸದಸ್ಯರಿಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸದೆ (ವಿಪ್ ಜಾರಿ) ಬಿಜೆಪಿ–ಜೆಡಿಎಸ್ ತರಾತುರಿಯಲ್ಲಿ ಸದಸ್ಯರನ್ನು ಒಗ್ಗೂಡಿಸುವ ಕೆಲಸ ಮಾಡಿದವು. ಆರಂಭದಲ್ಲಿ ಇದ್ದ ಕೆಲವರು ಹೊರಗೆ ತೆರಳಿದ್ದರು. ಕೆಲವರು ಮಧ್ಯಾಹ್ನದ ನಂತರ ಸದನಕ್ಕೆ ಬಂದಿರಲಿಲ್ಲ. ಇಂತಹ ಸನ್ನಿವೇಶದಲ್ಲೇ ಮತವಿಭಜನೆಯ ಸಮಯದ ಗಂಟೆ ಬಾರಿಸಿತು. ಗಂಟೆಯ ಸದ್ದು ನಿಲ್ಲುತ್ತಿದಂತೆ ಮಾರ್ಷಲ್‌ಗಳು ಎಲ್ಲ ಬಾಗಿಲುಗಳನ್ನೂ ಬಂದ್ ಮಾಡಿದರು.
ಬಾಗಿಲುಗಳು ಬಂದ್ ಆದ ನಂತರ ಬಿಜೆಪಿ ಸದಸ್ಯ ಎಂ.ಜಿ. ಮೂಳೆ ಓಡೋಡಿ ಬಂದರು. ಆದರೆ, ಸಮಯ ಮೀರಿದ್ದ ಕಾರಣ ಅವರಿಗೆ ಮತ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿಲ್ಲ. ಮತವಿಭಜನೆಯಲ್ಲಿ ಕಾಂಗ್ರೆಸ್‌ಗೆ 26 ಹಾಗೂ ಬಿಜೆಪಿ–ಜೆಡಿಎಸ್‌ಗೆ 25 ಮತಗಳು ಬಂದವು. ಒಂದು ಮತದ ಅಂತರದಿಂದ ಮಸೂದೆ ಅಂಗೀಕಾರವಾಯಿತು.
ತಟಸ್ಥವಾಗಿ ಉಳಿದ ಉಪಸಭಾಪತಿ:
ಮಸೂದೆಯ ಅಂಗೀಕಾರದ ಪ್ರಸ್ತಾವವನ್ನು ಮತವಿಭಜನೆಗೆ ಹಾಕಿದಾಗ ಸದಸ್ಯರು ಎದ್ದು ನಿಲ್ಲುವ ಮೂಲಕ ಪರ–ವಿರೋಧದ ಸಮ್ಮತಿ ನೀಡಿದರು. ಉಪಸಭಾಪತಿ ಬಿಜೆಪಿ ಎಂ.ಕೆ. ಪ್ರಾಣೇಶ್ ಅವರನ್ನು ಎದ್ದು ನಿಲ್ಲುವಂತೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿನಂತಿಸಿದರು. ಆದರೆ, ಪ್ರಾಣೇಶ್ ಅವರು ತಮ್ಮ ಆಸನ ಬಿಟ್ಟು ಕದಲಲಿಲ್ಲ.
ಮೂಳೆ ಅವರು ಒಂದು ನಿಮಿಷ ಮುಂಚೆ ಒಳಗೆ ಬಂದಿದ್ದರೂ ಅಥವಾ ಪ್ರಾಣೇಶ್ ಅವರು ಎದ್ದುನಿಂತಿದ್ದರೂ ಮತ ವಿಭಜನೆ ಸಮಬಲ ಪಡೆಯುತ್ತಿತ್ತು. ಸಭಾಪತಿಯ ನಿರ್ಣಾಯಕ ಮತ ಮಸೂದೆಯ ಭವಿಷ್ಯ ನಿರ್ಧರಿಸುತ್ತಿತ್ತು. ಪೂರ್ವ ತಯಾರಿಯಿಲ್ಲದೇ, ದುಡುಕಿದ ವಿಪಕ್ಷ ನಾಯಕರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋಗಿ, ತಾವೇ ಸಿಕ್ಕಿಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.