ADVERTISEMENT

ಪರಿಷತ್ ಚುನಾವಣೆ | ಮೂರೂ ಪಕ್ಷಗಳಲ್ಲಿ ಭಾರಿ ಪೈಪೋಟಿ

ಸ್ವಾಮೀಜಿಗಳಿಂದ ಸಿ.ಎಂ ಮೇಲೆ ಒತ್ತಡ ತಂತ್ರ, ಕಾಂಗ್ರೆಸ್‌ನಲ್ಲಿ ‘ಮಾಜಿ’ಗಳ ಮೇಲಾಟ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 20:37 IST
Last Updated 10 ಜೂನ್ 2020, 20:37 IST
   

ಬೆಂಗಳೂರು: ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಇದೇ 29ರಂದು ನಡೆಯಲಿರುವ ಚುನಾವಣೆಗೆ ಟಿಕೆಟ್‌ ಗಿಟ್ಟಿಸಲು ಮೂರೂ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳು ಬಿರುಸಿನ ಪೈಪೋಟಿ ಆರಂಭಿಸಿದ್ದಾರೆ.

ತೆರವಾಗಿರುವ ಏಳು ಸ್ಥಾನಗಳಲ್ಲಿ ಬಿಜೆಪಿಗೆ 4, ಕಾಂಗ್ರೆಸ್‌ಗೆ ‌2 ಮತ್ತು ಜೆಡಿಎಸ್‌ಗೆ 1 ಸ್ಥಾನ ಸಿಗಲಿದೆ. ಚುನಾವಣಾ ದಿನಾಂಕ ಪ್ರಕಟ ಆದ ಬೆನ್ನಲ್ಲೇ ಮೂರು ಪಕ್ಷಗಳ ಆಕಾಂಕ್ಷಿಗಳು ವರಿಷ್ಠರ ಮೇಲೆ ಪ್ರಭಾವ ಬೀರಲು ಸ್ವಾಮೀಜಿಗಳಿಂದ ಒತ್ತಡ ಹೇರುವುದು ಸೇರಿದಂತೆ ವಿಭಿನ್ನ ತಂತ್ರಗಳನ್ನು ಅನುಸರಿಸಲು ಶುರು ಮಾಡಿದ್ದಾರೆ.

ಬಹಳ ಕಾಲದಿಂದಲೂ ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವ ಬಿಜೆಪಿಯ ಆಕಾಂಕ್ಷಿಯೊಬ್ಬರು ವೀರಶೈವ ಸಮಾಜಕ್ಕೆ ಸೇರಿದ 20ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿದ್ದರು.ಅಲ್ಲದೆ, ಮಾಜಿ ಸಚಿವರಾದ ಎಂ.ಟಿ.ಬಿ. ನಾಗರಾಜ್‌, ಎಚ್‌.ವಿಶ್ವನಾಥ್‌ ಮತ್ತು ಆರ್‌.ಶಂಕರ್‌ ಅವರೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಪ್ರಭಾವಿಗಳಿಗೆ ಮಣೆ ಹಾಕದೇ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದ್ದು, ಈ ಮೂವರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಬಿಜೆಪಿಯಲ್ಲಿ ಸಿ.ಪಿ.ಯೋಗೇಶ್ವರ್, ರಮೇಶ‌ ಕತ್ತಿ, ನಿರ್ಮಲ್‌ ಕುಮಾರ್ ಸುರಾನ,ಎಂ.ಬಿ. ಭಾನುಪ್ರಕಾಶ್‌ ಅವರೂ ಆಕಾಂಕ್ಷಿಗಳಾಗಿದ್ದಾರೆ. ರಾಜ್ಯ ಸಭೆಗೆ ಸಾಮಾನ್ಯ ಕಾರ್ಯಕರ್ತರಾದ ಈರಣ್ಣ ಕಡಾಡಿ ಮತ್ತು ಅಶೋಕ್‌ ಗಸ್ತಿ ಅವರಿಗೆ ಟಿಕೆಟ್‌ ಸಿಕ್ಕಿದ ಹಿನ್ನೆಲೆಯಲ್ಲಿ ಇನ್ನೂ ಹಲವು ಕಾರ್ಯಕರ್ತರ ನಿರೀಕ್ಷೆ ಹೆಚ್ಚಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲೂ ಪೈಪೋಟಿ: ಕಾಂಗ್ರೆಸ್‌ಗೆ 2 ಸ್ಥಾನ ಸಿಗಲಿದ್ದು, ಇದಕ್ಕೆ ಘಟಾನುಘಟಿಗಳು ಪೈಪೋಟಿಗೆ ಇಳಿದಿದ್ದಾರೆ. ಮುದ್ದ ಹನುಮೇಗೌಡ, ವಿ.ಎಸ್‌.ಉಗ್ರಪ್ಪ, ನಜೀರ್ ಅಹಮದ್‌, ಎಂ.ಸಿ.ವೇಣುಗೋಪಾಲ್, ಅಬ್ದುಲ್‌ ಜಬ್ಬಾರ್, ನಿವೇದಿತಾ ಆಳ್ವ, ಜಯಮಾಲ, ಐವನ್ ಡಿಸೋಜಾ ಅವರು ಈಗಾಗಲೇ ಪ್ರಯತ್ನ ಆರಂಭಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೇ ಮಣೆ ಹಾಕಬಹುದು ಎಂಬ ಕಾರಣಕ್ಕೆ, ಉಳಿದ ಆಕಾಂಕ್ಷಿಗಳೂ ಇವರಿಗೆ ದುಂಬಾಲು ಬೀಳಲಾರಂಭಿಸಿದ್ದಾರೆ. ಎಂ.ಸಿ.ವೇಣುಗೋಪಾಲ್‌ ಅವರು ತಮಗೆ ಪೂರ್ಣ ಅವಧಿ ಸಿಗದ ಕಾರಣ ಇನ್ನೊಮ್ಮೆ ಅವಕಾಶ ನೀಡಬೇಕು. ಸವಿತಾ ಸಮಾಜಕ್ಕೆ ಸೇರಿದವರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ ಸಭೆ ಶುಕ್ರವಾರ ನಡೆಸಲಿದೆ. ‘ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಾಗಿದೆ. ಹೀಗಾಗಿ ಆಕಾಂಕ್ಷಿಗಳ ಪ್ರಾಥಮಿಕ ಪಟ್ಟಿಯೊಂದನ್ನು ಸಭೆಯಲ್ಲಿ ಸಿದ್ಧಪಡಿಸ ಲಾಗುತ್ತದೆ. ಬಳಿಕ ಅದರಲ್ಲಿ ಆಯ್ದು ಹೆಸರುಗಳನ್ನು ಹೈಕಮಾಂಡ್‌ಗೆ ಕಳಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿ ಗೆಲುವಿಗೆ ಬೇಕಾದ ಮತ: ಈಗ ವಿಧಾನಸಭೆಯಲ್ಲಿ 222 ಶಾಸಕರಿದ್ದಾರೆ. ಒಟ್ಟು 2 ಸ್ಥಾನಗಳು ಖಾಲಿ ಇವೆ. ಆಂಗ್ಲೊ ಇಂಡಿಯನ್ ಸೇರಿದರೆ ವಿಧಾನಸಭೆಯ 223 ಆಗುತ್ತದೆ. ಆದ್ದರಿಂದ ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಮತಗಳು ಬೇಕಾಗುತ್ತದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದರು.

ಜೆಡಿಎಸ್‌ನಲ್ಲೂ ಆಕಾಂಕ್ಷಿಗಳು
ಒಂದು ಸ್ಥಾನಕ್ಕಾಗಿ ಸಾಕಷ್ಟು ಆಕಾಂಕ್ಷಿಗಳು ಸ್ಪರ್ಧೆಗೆ ಇಳಿದಿದ್ದಾರೆ. ಕುಪೇಂದ್ರ ರೆಡ್ಡಿ, ಟಿ.ಎ.ಶರವಣ, ಜೆಡಿಎಸ್‌ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ, ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಆರ್‌.ಪ್ರಕಾಶ್‌ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಚುನಾವಣಾ ವೇಳಾಪಟ್ಟಿ
* ಜೂ 11:
ಅಧಿಸೂಚನೆ
* ಜೂ 18: ನಾಮಪತ್ರ ಸಲ್ಲಿಕೆಗೆ ಕಡೇ ದಿನ
* ಜೂ 19: ನಾಮಪತ್ರಗಳ ಪರಿಶೀಲನೆ
* ಜೂ 22: ನಾಮಪತ್ರ ಹಿಂಪಡೆಯಲು ಕಡೇ ದಿನ
* ಜೂ 29: ಮತದಾನ, ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.