ADVERTISEMENT

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌–ಚಿಂತನೆ

ವಿಧಾನ ಪರಿಷತ್‌ನಲ್ಲಿ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 20:00 IST
Last Updated 6 ಮಾರ್ಚ್ 2020, 20:00 IST
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿದರು  –ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸರ್ಕಾರ ಈ ಹಿಂದೆ ಜಾರಿಗೆ ತಂದ ಬಸ್‌ ಪಾಸ್‌ ನಿಯಮಗಳಿಂದಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ₹ 3 ಸಾವಿರ ಕೋಟಿಯಷ್ಟು ಬಾಕಿ ಬರಬೇಕಾಗಿದೆ. ಈ ದುಡ್ಡು ಬಂದರೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ನೀಡುವುದು ಸಾಧ್ಯ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯ ಸಾರಿಗೆ ಸಂಸ್ಥೆಗಳು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ತರಗತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ವಿತರಿಸುತ್ತಿವೆ, ಇದನ್ನು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂಬ ಬಯಕೆ ಸರ್ಕಾರಕ್ಕೆ ಇದೆ, ಆದರೆ ಹಳೆಯ ಬಾಕಿ ಪಾವತಿಯಾದರೆ ಈ ಯೋಜನೆಯನ್ನು ಸುಲಭವಾಗಿ ಜಾರಿಗೆ ತರಬಹುದಾಗಿದೆ’ ಎಂದರು.

ಬಸ್‌ ಪ್ರಯಾಣದ ಗರಿಷ್ಠ ಅಂತರವನ್ನು 60 ಕಿ.ಮೀ.ಗೆ ನಿಗದಿಪಡಿಸಿರುವುದು ಸರಿಯಲ್ಲ, ಅದೆಷ್ಟೋ ಕಡೆಗಳಲ್ಲಿ ಇನ್ನೂ ಅಧಿಕ ದೂರದಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರಬೇಕಾಗುತ್ತಿದೆ ಎಂಬುದನ್ನು ಸಚಿವರ ಗಮನಕ್ಕೆ ತರಲಾಯಿತು.

ADVERTISEMENT

ತಾಂತ್ರಿಕ ದೋಷದಿಂದ ಬಿಎಂಟಿಸಿ ಬಸ್‌ ಅಪಘಾತ ಸಂಭವಿಸಿದ ಕೇವಲ ಒಂದು ಪ್ರಕರಣ ನಡೆದಿದೆ. ಹೊಸದಾಗಿ 4 ಸಾವಿರ ಬಸ್‌ ಖರೀದಿಯ ಪ್ರಸ್ತಾವನೆ ಇದೆ, ವೋಲ್ವೊ ಬದಲಿಗೆ ಟಾಟಾ, ಅಶೋಕ್‌ ಲೇಲ್ಯಾಂಡ್‌ ಬಸ್‌ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು, ಬಿಜೆಪಿಯ ಡಾ.ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.