ADVERTISEMENT

ಬಡ್ಡಿ ಗುಳುಂ: ಸದನ ಸಮಿತಿ ರಚನೆ

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬಳಕೆಯಾಗದ ಅನುದಾನ ಬ್ಯಾಂಕ್‌ಗಳಲ್ಲಿ ಠೇವಣಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 20:04 IST
Last Updated 13 ಮಾರ್ಚ್ 2020, 20:04 IST
ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಎಸ್.ಆರ್‌.ಪಾಟೀಲ –ಪ್ರಜಾವಾಣಿ ಚಿತ್ರ
ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಎಸ್.ಆರ್‌.ಪಾಟೀಲ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವಿವಿಧ ವಿಭಾಗಗಳಲ್ಲಿ ಬಿಡುಗಡೆಯಾಗಿದ್ದ ಅನುದಾನ ಬಳಕೆಯಾಗದೆ, ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದು,ಬಡ್ಡಿಯನ್ನು ವ್ಯವಸ್ಥಿತವಾಗಿ ನುಂಗಿ ಹಾಕಿರುವ ಆರೋಪ ಇದೆ, ಇದರ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂಬ ಒಕ್ಕೊರಲ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದೆ.

ವಿಧಾನ ಪರಿಷತ್‌ನಲ್ಲಿಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಘುನಾಥ ರಾವ್ ಮಲ್ಕಾಪುರೆ ವಿಷಯ ಪ್ರಸ್ತಾಪಿಸಿ, ₹ 284 ಕೋಟಿ ಬಡ್ಡಿ ನುಂಗಿ ಹಾಕಿದ ಈ ಹಗರಣದಲ್ಲಿ ಇಲಾಖೆಯ ಅಧಿಕಾರಿಗಳ ಜತೆಗೆ ಬ್ಯಾಂಕ್‌ ಅಧಿಕಾರಿಗಳು, ತನಿಖಾ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಇದೆ, ಸದನ ಸಮಿತಿಯಿಂದ ತನಿಖೆ ನಡೆಸಿದರಷ್ಟೇ ಸತ್ಯ ಹೊರಬರಬಹುದು ಎಂದು ಒತ್ತಾಯಿಸಿದರು. ಪಕ್ಷಭೇದ ಮರೆತು ಎಲ್ಲ ಸದಸ್ಯರೂ ಇದಕ್ಕೆ ದನಿಗೂಡಿಸಿದರು. ಸದನ ಸಮಿತಿ ರಚಿಸಲು ಸರ್ಕಾರ ಒಪ್ಪಿಕೊಂಡಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಕಟಿಸಿದರು.

‘ಈ ಮೊದಲು ಎರಡು ಬಾರಿ ತನಿಖೆ ನಡೆದಿದ್ದು, ‘ಬಿ’ ವರದಿ ಸಲ್ಲಿಕೆಯಾಗಿದೆ, ಇಬ್ಬರು ಅಧಿಕಾರಿಗಳ ಅಮಾನತು ಆದೇಶವೂ ರದ್ದಾಗಿದೆ. ಆದರೆ ಬ್ಯಾಂಕ್‌ ಖಾತೆಗಳಲ್ಲಿ ಇಟ್ಟ ಠೇವಣಿಯಿಂದ ₹ 284 ಕೋಟಿ ಬಡ್ಡಿ ಬಂದಿತ್ತು. ಕೇವಲ ₹ 86 ಕೋಟಿಯನ್ನು ಪಡೆದುಕೊಳ್ಳಿ ಎಂದು ಬ್ಯಾಂಕ್‌ನವರು ಹೇಳುತ್ತಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್‌ನ 98 ಖಾತೆಗಳ ಪೈಕಿ ಒಂದು ಡಮ್ಮಿ ಖಾತೆಯೂ ಇದೆ, ಗ್ರಾಮೀಣ ಜನರಿಗಾಗಿ ರೂಪಿಸಲಾಗಿರುವ ಯೋಜನೆಗಳ ವಿಚಾರದಲ್ಲಿ ನಡೆದಿರುವ ದೊಡ್ಡ ಹಗರಣ ಇದು’ ಎಂದು ಈಶ್ವರಪ್ಪ ವಿವರಿಸಿದರು.

ADVERTISEMENT

ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಸಹಿತ ಪಕ್ಷಭೇದ ಮರೆತು ಎಲ್ಲ ಸದಸ್ಯರೂ ಹಗರಣದ ಬಗ್ಗೆ ಕಳವಳ ವ್ಯಕ್ತಪಡಿಸಿ, ಸದನ ಸಮಿತಿಯಿಂದಲೇ ತನಿಖೆಯಾಗಬೇಕು ಎಂದರು. ಸಚಿವರು ಅದಕ್ಕೆ ಒಪ್ಪಿಕೊಂಡರು.

*
ಹಗರಣದಲ್ಲಿ ಶಾಮೀಲಾಗಿರುವ ಯಾರನ್ನೂ ಬಚಾವ್‌ ಮಾಡುವ ಕೆಲಸ ಮಾಡುವುದಿಲ್ಲ, ಸತ್ಯ ಹೊರಬರಬೇಕು.
-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

**

ಅಂಕಿ ಅಂಶಗಳು
₹ 685 ಕೋಟಿ:ಬ್ಯಾಂಕ್‌ಗಳಲ್ಲಿ ಇಟ್ಟ ಠೇವಣಿ
₹ 284 ಕೋಟಿ:ಬಡ್ಡಿ ರೂಪದಲ್ಲಿ ಬರಬೇಕಾದ ದುಡ್ಡು
₹ 86 ಕೋಟಿ:ಬ್ಯಾಂಕ್‌ಗಳು ನೀಡಲು ಮುಂದಾದ ದುಡ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.